ಉದಯವಾಹಿನಿ, ದೋಹಾ: (ಕತಾರ್) ಬಲವಂತವಾಗಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಅಫ್ಘಾನಿಸ್ತಾನದಲ್ಲಿ ಸದ್ಯ ಮಹಿಳೆ ಮತ್ತು ಮಕ್ಕಳ ಹಕ್ಕುಗಳು ಸೇರಿದಂತೆ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಲಾಗುತ್ತಿದ್ದು, ಇದೀಗ ಇದರ ವಿರುದ್ಧ ಅಮೆರಿಕಾ ಆಕ್ರೋಶ ವ್ಯಕ್ತಪಡಿಸಿದೆ. ದೋಹಾದಲ್ಲಿ ನಡೆದ ಸಭೆಯಲ್ಲಿ ಮಾನವ ಹಕ್ಕುಗಳ ವಿರೋಧಿ ನೀತಿಗಳನ್ನು ತೆಗೆದುಹಾಕಬೇಕೆಂದು ಅಮೆರಿಕಾವು ತಾಲಿಬಾನ್‌ಗೆ ಸೂಚಿಸಿದೆ. ದೋಹಾದಲ್ಲಿ ಭಾನುವಾರ ಮತ್ತು ಸೋಮವಾರದಂದು ಹಿರಿಯ ತಾಲಿಬಾನ್ ಪ್ರತಿನಿಧಿಗಳು ಮತ್ತು ತಾಂತ್ರಿಕ ವೃತ್ತಿಪರರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಇದೀಗ ತಿಳಿಸಿದೆ. ಇನ್ನು ೨೦೨೧ರ ಆಗಸ್ಟ್‌ನಲ್ಲಿ ಅಮೆರಿಕಾ ಸೇನೆಯು ಅಫ್ಗಾನಿಸ್ತಾನವನ್ನು ತೊರೆದ ಬಳಿಕ ಚುನಾಯಿತ ಸರ್ಕಾರವನ್ನು ಕೆಳಗಿಳಿಸಿ ತಾಲಿಬಾನ್ ಅಧಿಕಾರಕ್ಕೇರಿತ್ತು. ಅಲ್ಲದೆ ಮಹಿಳೆಯರು, ಬಾಲಕಿಯರ ಹಕ್ಕುಗಳನ್ನು ಬಳಿಕ ಮೊಟಕುಗೊಳಿಸಲಾಗಿತ್ತು.
ಇದರಲ್ಲಿ ಅಮೆರಿಕಾವು ಹಕ್ಕುಗಳ ವಿಚಾರದಲ್ಲಿ ತಾಲಿಬಾನ್‌ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ತಾಕೀತು ಮಾಡಿದೆ. ಬಂಧಿಸಲ್ಪಟ್ಟಿರುವ ಅಮೆರಿಕಾ ನಾಗರಿಕರನ್ನು ಕೂಡ ಬಿಡುಗಡೆ ಮಾಡಬೇಕೆಂದು ಆದೇಶಿಸಿದೆ.
