ಉದಯವಾಹಿನಿ, ಲಂಡನ್: ಶತ್ರು ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿ ಮುಚ್ಚುವುದು ಇರಾನ್‌ನ ಕಾನೂನುಬದ್ಧ ಹಕ್ಕು ಎಂದು ವಿಶ್ವಸಂಸ್ಥೆಯಲ್ಲಿ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಪ್ರತಿಪಾದಿಸಿದ್ದಾರೆ.ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಅರಘ್ಚಿ, ಹಾರ್ಮುಜ್ ಜಲಸಂಧಿಯಲ್ಲಿ ಅಭದ್ರತೆ ಕಾಡಲು ಅಮೆರಿಕ ಮತ್ತು ಇಸ್ರೇಲ್‌ನ ಕಾನೂನು ಉಲ್ಲಂಘನೆ ಮತ್ತು ಆಕ್ರಮಣಶೀಲತೆಯೆ ಕಾರಣ. ಹಾಗಾಗಿಯೇ ಇರಾನ್‌ನ ಅಧಿಕಾರಿಗಳು ಜಲಮಾರ್ಗದಲ್ಲಿ ಭದ್ರತೆಯನ್ನ ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನ ತೆಗೆದುಕೊಂಡಿದ್ದಾರೆ. ಅಲ್ಲದೇ ಶತ್ರು ರಾಷ್ಟ್ರಗಳಿಗೆ ಜಲಮಾರ್ಗ ಮುಚ್ಚುವುದು ಮತ್ತು ಮಿತ್ರರಾಷ್ಟ್ರಗಳಿಗೆ ತೆರೆಯುವುದು ಇರಾನ್‌ನ ಕಾನೂನುಬದ್ಧ ಹಕ್ಕಾಗಿದೆ ಎಂದು ಅರಘ್ಚಿ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್‌ಗೆ ತಿಳಿಸಿದ್ದಾರೆ.
ಅಮೆರಿಕದ ಪಡೆಗಳು ಗಲ್ಫ್ ಸಹಕಾರ ಮಂಡಳಿ ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸಿಕೊಳ್ಳುತ್ತಿದೆ. ಇರಾನ್ ತನ್ನ ಮಿಲಿಟರಿ ನೆಲೆಗಳ ಮೇಲೆ ದಾಳಿ ಆರಂಭಿಸುತ್ತಿದ್ದಂತೆ ಅಮೆರಿಕ ಸೇನೆಯ ಅಧಿಕಾರಿಗಳು ಮಿಲಿಟರಿ ನೆಲೆಗಳಿಂದ ಪಲಾಯನ ಮಾಡಿ, ಹೋಟೆಲ್‌ಗಳಲ್ಲಿ ಅಡಗಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅದಕ್ಕೆ ಪೂರಕವಾದ ಹೋಟೆಲ್ ಬುಕಿಂಗ್ ರಶೀದಿಗಳನ್ನೂ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
