ಉದಯವಾಹಿನಿ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆ ಚಿತ್ರಕ್ಕೆ ನಿರ್ದೇಶಕ ಮಾರುತಿ ಅವರು ಆ್ಯಕ್ಷನ್-ಕಟ್ ಹೇಳಿದ್ದರು. ಪ್ರಭಾಸ್ ಅವರ ಮೊದಲ ಹಾರರ್ ಸಿನಿಮಾ ಎಂಬ ಕಾರಣಕ್ಕೆ ಹೈಪ್ ಹೆಚ್ಚಿತ್ತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಆ ಸಿನಿಮಾ ಮಕಾಡೆ ಮಲಗಿತು. ‘ದಿ ರಾಜಾ ಸಾಬ್’ ಸಿನಿಮಾದ ಸೋಲನ್ನು ಒಪ್ಪಿಕೊಂಡಿರುವ ನಿರ್ದೇಶಕ ಮಾರುತಿ ಈಗ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.

2026ರ ಆರಂಭದಲ್ಲಿ ಬಿಡುಗಡೆಯಾದ ‘ದಿ ರಾಜಾ ಸಾಬ್’ ಹಾರರ್ ಕಾಮಿಡಿ ಸಿನಿಮಾ ಆದ್ದರಿಂದ ಭಾರಿ ಕುತೂಹಲ ಮೂಡಿಸಿತ್ತು. ಮೊದಲ ದಿನವೇ ವಿಶ್ವದಾದ್ಯಂತ 100 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದರೂ, ಕಳಪೆ ವಿಮರ್ಶೆ ಮತ್ತು ಪ್ರೇಕ್ಷಕರ ನಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ಚಿತ್ರದ ಕಲೆಕ್ಷನ್ ಕುಸಿಯಿತು. ಒಟ್ಟಾರೆ 200 ಕೋಟಿ ರೂಪಾಯಿ ಗಳಿಸಿದರೂ ಸಹ, ವಿತರಕರಿಗೆ ಸುಮಾರು 160-170 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳ ನಂತರ ಸೋಶಿಯಲ್ ಮೀಡಿಯಾದಿಂದ ದೂರವಿದ್ದ ಮಾರುತಿ, ಶ್ರೀರಾಮನವಮಿಯ ಶುಭ ಸಂದರ್ಭದಲ್ಲಿ ಅಭಿಮಾನಿಗಳಿಗೆ ಅಪ್‌ಡೇಟ್ ನೀಡಿದ್ದಾರೆ. ತಮ್ಮ ಮನೆಯ ದೇವರ ಕೋಣೆಯಲ್ಲಿ ಪೂಜೆ ಸಲ್ಲಿಸುತ್ತಿರುವ ಫೋಟೋ ಹಂಚಿಕೊಂಡಿರುವ ಅವರು, ದೇವರ ಮುಂದಿರುವ ಸ್ಕ್ರಿಪ್ಟ್ ಪುಸ್ತಕದ ಮೇಲೆ ಹೂವುಗಳನ್ನು ಇರಿಸಿ ಹೊಸ ಚಿತ್ರದ ಸುಳಿವು ನೀಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!