ಉದಯವಾಹಿನಿ, ಪುಣೆ (ಮಹಾರಾಷ್ಟ್ರ): ಪೊಲೀಸ್ ನೇಮಕಾತಿ ವೇಳೆ ಸಂಭಾಜಿನಗರದಲ್ಲಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಮಾಸುವ ಮುನ್ನ ಪುಣೆಯಲ್ಲೂ ಅಂತಹದೇ ಪ್ರಕರಣ ನಡೆದಿದೆ. ಪುಣೆಯ ಶಿವಾಜಿನಗರದಲ್ಲಿ ನಡೆಯುತ್ತಿರುವ ಪೊಲೀಸ್ ನೇಮಕಾತಿ ವೇಳೆ ಯುವಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಪುರುಷೋತ್ತಮ್ ಬುರ್ಕುಲ್ ಮೃತ ಯುವಕ. ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುಣೆಯ ಸಸೂನ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪೊಲೀಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಪುರುಷೋತ್ತಮ್ ಅಗಲಿಕೆಯಿಂದ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.
ಓಡುವಾಗ ಕುಸಿದು ಬಿದ್ದ ಯುವಕ: ನೇಮಕಾತಿಯ ಭಾಗವಾಗಿ 1600 ಮೀಟರ್ ಓಟದ ಪರೀಕ್ಷೆಯಲ್ಲಿ ಯುವಕ ಭಾಗಿಯಾಗಿದ್ದ. ಈ ವೇಳೆ ನಾಲ್ಕನೇ ಸುತ್ತು ಓಡುವಾಗ ಕುಸಿದುಬಿದ್ದು, ಸಾವನ್ನಪ್ಪಿದ್ದಾನೆ. ಬಳಿಕ ನೇಮಕಾತಿ ಸ್ಥಳದಲ್ಲಿ ಆತಂಕ ಮನೆ ಮಾಡಿತ್ತು.
ಯುವಕನ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ, ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವಷ್ಟೇ ನಿಜಾಂಶ ಗೊತ್ತಾಗಲಿದೆ. ಪೊಲೀಸ್ ಕನಸು ಕಂಡಿದ್ದ ಯುವಕ: ಯುವಕ ಪುರುಷೋತ್ತಮ್ ಪೊಲೀಸ್ ಆಗಬೇಕೆಂದು ಕನಸು ಕಂಡಿದ್ದ. ಅಂತೆಯೇ ನೇಮಕಾತಿಯ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಭಾಗಿಯಾಗಿದ್ದ. ಆದರೆ 1600 ಮೀಟರ್ ಓಟದ ವೇಳೆ ಕೊನೆಯುಸಿರೆಳೆದಿದ್ದಾನೆ.
ಬೇಸಿಗೆ ಹಿನ್ನೆಲೆ ಪಾನೀಯ, ಉಪಹಾರ ವ್ಯವಸ್ಥೆ: ರಾಜ್ಯಾದ್ಯಂತ ಬೇಸಿಗೆ ಬಿಸಲು ತೀವ್ರಗೊಳುತ್ತಿದೆ. ಅಂತೆಯೇ ಸದ್ಯ ಪುಣೆಯ ಶಿವಾಜಿನಗರ ಮೈದಾನದಲ್ಲಿ ನಡೆಯುತ್ತಿರುವ ಪೊಲೀಸ್ ನೇಮಕಾತಿಯಲ್ಲಿ ಕನಸುಹೊತ್ತು ಭಾಗವಹಿಸಿದ್ದ ಆಕಾಂಕ್ಷಿ ಯುವಕರಿಗೆ ವಿವಿಧ ಸಂಘ ಸಂಸ್ಥೆಗಳು ನೀರು ಮತ್ತು ಉಪಹಾರದ ವ್ಯವಸ್ಥೆ ಮಾಡಿವೆ. ನೇಮಕಾತಿ ವೇಳೆ ನಡೆದ ಸಾವು ನೋವು: ಪುಣೆ ನಗರ ಸೇರಿದಂತೆ ರಾಜ್ಯಾದ್ಯಂತ ವಿವಿಧ ಪೊಲೀಸ್ ಪ್ರಧಾನ ಕಚೇರಿಗಳಲ್ಲಿ ಪೊಲೀಸ್ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಕೆಲ ದಿನಗಳ ಹಿಂದೆ, ಸಂಭಾಜಿನಗರದಲ್ಲಿ ಪೊಲೀಸ್ ನೇಮಕಾತಿ ವೇಳೆಯೇ ಆಕಾಂಕ್ಷಿ ಯುವಕ ಮೃತಪಟ್ಟಿದ್ದ. ಹಾಗೆಯೇ ಬೀಡ್‌ನಲ್ಲಿಯೂ 1600 ಮೀಟರ್ ಓಡುವಾಗ ದೀಪಕ್ ಎಂಬ ಯುವಕ ಕುಸಿದುಬಿದ್ದು ಅಸ್ವಸ್ಥನಾಗಿದ್ದ. ಬಳಿಕ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದ ಘಟನೆ ವರದಿಯಾಗಿತ್ತು. ದೀಪಕ್ ಅದೇ ಜಿಲ್ಲೆಯ ಪಾರ್ಲಿ ನಿವಾಸಿಯಾಗಿದ್ದರು.ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯುತ್ತಿರುವ ಪ್ರದೇಶದಲ್ಲಿ ಸಿಸಿಟಿವಿ ಮತ್ತು ವಿಡಿಯೋ ರೆಕಾರ್ಡಿಂಗ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಭ್ಯರ್ಥಿಗಳು ಯಾವುದೇ ಉದ್ದೀಪನ ಮದ್ದುಗಳನ್ನು ತೆಗೆದುಕೊಂಡಿದ್ದಾರೆಯೇ ಎಂಬುದನ್ನು ಪರೀಕ್ಷಿಸಲು ರಕ್ತ ಪರೀಕ್ಷೆಗಳನ್ನು ಸಹ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.
