ಉದಯವಾಹಿನಿ, ಸುರೇಂದ್ರನಗರ(ಗುಜರಾತ್​): ಮಧ್ಯಪ್ರಾಚ್ಯದಲ್ಲಿ ಇರಾನ್​, ಅಮೆರಿಕ ಮತ್ತು ಇಸ್ರೇಲ್​ ನಡುವಿನ ಸಂಘರ್ಷ ಗುಜರಾತ್​​ನ ಉದ್ಯಮವನ್ನು ತಲೆಕೆಳಗು ಮಾಡಿದೆ. ಸುರೇಂದ್ರನಗರ ಜಿಲ್ಲೆಯ ಥಂಗಢ್‌ನಲ್ಲಿನ 300ಕ್ಕೂ ಹೆಚ್ಚು ಸೆರಾಮಿಕ್ ಕಾರ್ಖಾನೆಗಳನ್ನು ಮುಚ್ಚಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕಾರ್ಖಾನೆಗಳು ಅನಿರ್ದಿಷ್ಟಾವಧಿಗೆ ಮುಚ್ಚಲ್ಪಟ್ಟಿರುವುದರಿಂದ, ಅಲ್ಲಿ ಕೆಲಸ ಮಾಡುತ್ತಿರುವ 40 ಸಾವಿರಕ್ಕೂ ಅಧಿಕ ಕಾರ್ಮಿಕರ ಉದ್ಯೋಗ ಖೋತಾ ಆಗುವ ಸಾಧ್ಯತೆ ಇದೆ. ಅವರನ್ನು ಅಲ್ಲಿಂದ ಕಳುಹಿಸಲು ಕಾರ್ಖಾನೆಗಳ ಮಾಲೀಕರು ಮುಂದಾಗಿದ್ದಾರೆ.
ಅನಿಲ ಕೊರತೆ, ಕಾರ್ಖಾನೆಗಳಲ್ಲಿ ಕೆಲಸ ಸ್ಥಗಿತ: ಗಲ್ಫ್ ರಾಷ್ಟ್ರಗಳಿಂದ ಬರುತ್ತಿದ್ದ ಅನಿಲ ಸರಬರಾಜಿನ ಕೊರತೆ ಉಂಟಾಗಿದೆ. ಇದರಿಂದ ಇಂಧನ ದರ ಹೆಚ್ಚಳ ಮತ್ತು ವ್ಯತ್ಯಯದಿಂದ ಉತ್ಪಾದನೆ ಗಣನೀಯ ಕುಸಿತ ಕಂಡಿದೆ. ಕಾರ್ಖಾನೆಗಳಿಗೆ ಬೇಕಾದ ಪ್ರೊಪೇನ್​ ಇಂಧನದ ಪ್ರತಿ ಕೆಜಿ ಬೆಲೆ 46 ರೂಪಾಯಿಗೆ ಏರಿದೆ. ಇದರಿಂದ ಥಂಗಢ್ ಸೆರಾಮಿಕ್ ಇಂಡಸ್ಟ್ರಿ ಅಸೋಸಿಯೇಷನ್​​ನ 200ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು ಸಭೆ ನಡೆಸಿದ ನಂತರ ಕಾರ್ಖಾನೆಗಳನ್ನು ಮುಚ್ಚುವ ನಿರ್ಧಾರಕ್ಕೆ ಬರಲಾಗಿದೆ.
40ಸಾವಿರ ಉದ್ಯೋಗಿಗಳಿಗೆ ಸಂಕಷ್ಟ: ಜಿಲ್ಲೆಯ ಅತಿದೊಡ್ಡ ಸೆರಾಮಿಕ್ ಉದ್ಯಮ ಇಂದಿನಿಂದ (ಭಾನುವಾರ) ಕಾರ್ಯಾಚರಣೆ ಸ್ಥಗಿತಗೊಳಿಸುತ್ತಿದೆ. ಕೈಗಾರಿಕೋದ್ಯಮಿಗಳು ತಮ್ಮ ಕಾರ್ಖಾನೆಗಳನ್ನು ಇಂದು ತೆರೆದಿಲ್ಲ. ಅವುಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಅವರವರ ಊರುಗಳಿಗೆ ಹಿಂತಿರುಗಿಸಲಾಗುತ್ತಿದೆ. ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಚಾಲಕರು, ನುರಿತ ಕುಶಲಕರ್ಮಿಗಳು ಮತ್ತು ಇತರ ಉದ್ಯೋಗಿಗಳೂ ಸೇರಿದಂತೆ 40 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಖೋತಾ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಾರ್ಖಾನೆಗಳು ಪುನರಾರಂಭಗೊಂಡ ನಂತರ ಅವರನ್ನು ಮತ್ತೆ ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂದು ಕೈಗಾರಿಕೋದ್ಯಮಿಗಳು ಭರವಸೆ ನೀಡಿದ್ದಾರೆ. ಆದರೆ, ಸೆರಾಮಿಕ್ ಕಾರ್ಖಾನೆಗಳ ಮುಚ್ಚುವಿಕೆಯಿಂದ ಇಷ್ಟು ದೊಡ್ಡ ಪ್ರಮಾಣದ ಕಾರ್ಮಿಕರ ಜೀವನೋಪಾಯವನ್ನು ಕಸಿದಂತಾಗಿದೆ.

ಉತ್ಪಾದನೆ ದುಬಾರಿ: ಥಂಗಡ್​ ಸೆರಾಮಿಕ್ ವಲಯದ ಕೈಗಾರಿಕೋದ್ಯಮಿ ಸಂಜಯ್ ಬದರ್ಖಿಯಾ ಮಾತನಾಡಿ, “ಇಂಧನ ಬೆಲೆಗಳು ನಿರಂತರವಾಗಿ ಏರುತ್ತಿವೆ. ಪ್ರಸ್ತುತ, ಅದರ ದರ 46ರಷ್ಟು ಹೆಚ್ಚಿಸಲಾಗಿದೆ. ದರ ಏರಿಕೆ ಜೊತೆಗೆ ಅದರ ಲಭ್ಯತೆಯೂ ಕಡಿಮೆ ಇದೆ. ಇದರಿಂದ ಉತ್ಪಾದನೆ ಕುಸಿದಿದೆ. ಈ ಪರಿಸ್ಥಿತಿಯಲ್ಲಿ, ಸೆರಾಮಿಕ್ಸ್ ಉದ್ಯಮದ ತಯಾರಕರು ತಮ್ಮ ಉತ್ಪನ್ನಗಳನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನಗಳು ದುಬಾರಿ ಬೆಲೆಗೆ ಬಿಕರಿಯಾಗದ ಕಾರಣ ನಷ್ಟವುಂಟಾಗುತ್ತಿದೆ. ಹೀಗಾಗಿ, ಉತ್ಪಾದನೆ ನಿಲ್ಲಿಸಿ ಕಾರ್ಖಾನೆಗಳಿಗೆ ಬಂದ್​ ಮಾಡುವ ನಿರ್ಧಾರಕ್ಕೆ ಬರಲಾಗಿದೆ” ಎಂದರು.

Leave a Reply

Your email address will not be published. Required fields are marked *

error: Content is protected !!