ಉದಯವಾಹಿನಿ, ಪುರುಲಿಯಾ(ಪಶ್ಚಿಮ ಬಂಗಾಳ): ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕಾರಕ್ಕೆ ಬಂದರೆ ಜನರಿಗೆ ಮಾಸಿಕವಾಗಿ ಹಣ ಸಿಗುವಂತೆ ಮಾಡುವ ‘ಲಕ್ಷ್ಮಿ ಭಂಡಾರ್’ ಯೋಜನೆ ನಿಲ್ಲಿಸುತ್ತದೆ. ಜನರು ಮಾಂಸಾಹಾರ ತಿನ್ನದಂತೆಯೂ ನಿಷೇಧ ಹೇರಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದರು.
ಇಂದು (ಭಾನುವಾರ) ಇಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಬೇಕು ಎಂದು ಟೀಕಿಸಿದರು. ಒಂದು ವೇಳೆ, ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಜನರಿಗೆ ನಮ್ಮ ಸರ್ಕಾರದಿಂದ ನೀಡಲಾಗುತ್ತಿರುವ ಆರ್ಥಿಕ ಸಹಾಯದ ಸ್ಕೀಂ ನಿಲ್ಲಿಸುವುದರ ಜೊತೆಗೆ ಮಾಂಸಾಹಾರದ ಮೇಲೂ ನಿಷೇಧ ಹೇರಲಿದೆ. ನೀವೇ ಯಾವ ಸರ್ಕಾರ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ ಎಂದರು.
ಮೊದಲು ಶಾ ವಿರುದ್ಧ ಚಾರ್ಜ್‌ಶೀಟ್ ಹಾಕಬೇಕು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮ್ಮ (ಟಿಎಂಸಿ) ಸರ್ಕಾರದ ವಿರುದ್ಧ ಆರೋಪಗಳ ಚಾರ್ಜ್‌ಶೀಟ್ ಬಿಡುಗಡೆ ಮಾಡಿದ್ದಾರೆ. ಆದರೆ, ಅವರು ಮಾಡಿದ ಕೃತ್ಯಗಳ ವಿರುದ್ಧ ಮೊದಲು ಆರೋಪಪಟ್ಟಿ ಹಾಕಬೇಕು ಎಂದು ತಿರುಗೇಟು ನೀಡಿದರು.ವಿಧಾನಸಭೆ ಚುನಾವಣೆಗೂ ಮುನ್ನ, ಎಸ್‌ಐಆರ್ ಪ್ರಕ್ರಿಯೆ ಹೆಸರಿನಲ್ಲಿ ರಾಜ್ಯದ 1.2 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. ಈ ಮೂಲಕ ಅವರ ಮತದಾನದ ಹಕ್ಕನ್ನು ಚುನಾವಣಾ ಆಯೋಗ ಕಸಿದಿದೆ ಎಂದು ಮಮತಾ ಆರೋಪಿಸಿದರುಮೂರನೇ ಪೂರಕ ಮತಪಟ್ಟಿ ಪ್ರಕಟ: ಬಂಗಾಳ ವಿಧಾನಸಣೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಕೇಂದ್ರ ಚುನಾವಣಾ ಆಯೋಗ ಇಂದು (ಭಾನುವಾರ) ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ ಮೂರನೇ ಪೂರಕ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿತು. ಮಾರ್ಚ್ 27 ರಂದು ಎರಡನೇ ಪೂರಕ ಮತದಾರರ ಪಟ್ಟಿ ನೀಡಿತ್ತು. ಮೂರು ಪೂರಕ ಪಟ್ಟಿ ಬಿಡುಗಡೆ ಮಾಡಿದ್ದರೂ, ಅದರಲ್ಲಿ ಯಾವ ಮತದಾರರನ್ನು ಕೈಬಿಡಲಾಗಿದೆ, ಯಾರನ್ನು ಸೇರಿಸಲಾಗಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಬಿಜೆಪಿಯಿಂದ ಆರೋಪಪಟ್ಟಿ ಬಿಡುಗಡೆ: ರಾಜ್ಯದಲ್ಲಿ ಈ ಬಾರಿ ಅಧಿಕಾರ ಸ್ಥಾಪನೆ ಮಾಡುವ ಗುರಿ ಹೊಂದಿರುವ ಬಿಜೆಪಿ, ಟಿಎಂಸಿ ಸರ್ಕಾರದ ವೈಫಲ್ಯಗಳು ಮತ್ತು ರಾಜ್ಯದಲ್ಲಿ ನಡೆದ ಘಟನಾವಳಿಗಳ ಕುರಿತ ಆರೋಪಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿತು. ಮಮತಾ ನೇತೃತ್ವದ ಸರ್ಕಾರದ ಭ್ರಷ್ಟಾಚಾರ, ಕಾನೂನು ಮತ್ತು ಸುವ್ಯವಸ್ಥೆಯ ಕುಸಿತ, ಮಹಿಳೆಯರಿಗೆ ಭದ್ರತೆ ಕೊರತೆ, ಸಿಂಡಿಕೇಟ್ ರಾಜ್‌ನ ಹರಡುವಿಕೆ, ಆರೋಗ್ಯ ಮತ್ತು ಶಿಕ್ಷಣದಲ್ಲಿನ ಬಿಕ್ಕಟ್ಟುಗಳಿಗೆ ಸಂಬಂಧಿಸಿದ ಆರೋಪಗಳು ಈ ‘ಚಾರ್ಜ್‌ಶೀಟ್’ನಲ್ಲಿವೆ.ಚುನಾವಣಾ ವೇಳಾಪಟ್ಟಿ: 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು 29ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೇ 4ರಂದು ಮತ ಎಣಿಕೆ ನಡೆಯಲಿದೆ.
