ಉದಯವಾಹಿನಿ, ಕೊಟ್ಟಾಯಂ, ಕೇರಳ: ಪ್ರಸ್ತಾವಿತ FCRA( ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ) ತಿದ್ದುಪಡಿಗಳ ಅಡಿ RSS ಮಾತ್ರ ವಿದೇಶಿ ಹಣವನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ ಹಾಗೂ ಮತ್ತು ಇತರ ಸಂಸ್ಥೆಗಳು ವಿದೇಶಿ ಹಣವನ್ನು ಪಡೆಯುವುದನ್ನು ನಿರ್ಬಂಧಿಸಲ್ಪಡುತ್ತವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಗಂಭೀರ ಆರೋಪ ಮಾಡಿದ್ದಾರೆ. ಪುತುಪ್ಪಳ್ಳಿಯಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (FCRA) ತಿದ್ದುಪಡಿ ಮಸೂದೆಯನ್ನು ಪರಿಚಯಿಸುತ್ತಿರುವುದು ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.
ಅತಿ ದೊಡ್ಡ ಕ್ರಿಶ್ಚಿಯನ್ ಸಮುದಾಯವನ್ನು ಹೊಂದಿರುವ ಕೊಟ್ಟಾಯಂ ಜಿಲ್ಲೆಯಲ್ಲಿ FCRA ಪ್ರಮುಖ ವಿಷಯವಾಗಿ ಹೊರಹೊಮ್ಮಿದೆ. ಕೇಂದ್ರ ಸರ್ಕಾರ ಇದ್ದಕ್ಕಿದ್ದಂತೆ, FCRA ಮಸೂದೆ ತರಲು ಹೊರಟಿದೆ ಎಂಬುದನ್ನು ನಾವು ಗಮನಿಸಿದ್ದೇವೆ. ಆಸಕ್ತಿದಾಯಕ ವಿಷಯವೆಂದರೆ ವಿದೇಶದಿಂದ ಹಣವನ್ನು ಪಡೆಯಬಹುದಾದ ಒಂದೇ ಒಂದು ಸಂಸ್ಥೆ ಇದೆ. ಅದು ಆರ್​ ಎಸ್​ಎಸ್​, ಈ RSS ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆಯು ವಿದೇಶದಿಂದ ಹಣವನ್ನು ಪಡೆಯಲು ಸಾಧ್ಯವಿಲ್ಲ ಎಂದು ಲೋಕಸಭೆ ಪ್ರತಿಪಕ್ಷ ನಾಯಕರು ಆರೋಪಿಸಿದರು.

ಆರ್‌ಎಸ್‌ಎಸ್‌ನ ವಿಶೇಷತೆ ಏನೆಂದರೆ ಅವರಿಗೆ ಪ್ರತ್ಯೇಕ ನಿಯಮಗಳಿವೆ, ಅವರು ದ್ವೇಷವನ್ನು ಹರಡುತ್ತಾರೆ ಮತ್ತು ಜನರನ್ನು ವಿಭಜಿಸುತ್ತಾರೆ. ಬಿಜೆಪಿ ಕಾರ್ಯನಿರ್ವಹಿಸುವುದು ಹಾಗೆಯೇ ಎಂದು ಅವರು ಇದೇ ವೇಳೆ ಆರ್​ ಎಸ್​ಎಸ್​ ವಿರುದ್ಧ ಹರಿಹಾಯ್ದರು. ಕೇಂದ್ರದ ನೀತಿಗಳು ಸಾಮಾನ್ಯ ಜನರಿಗೆ ಕಡಿಮೆ ಪ್ರಯೋಜನವನ್ನು ನೀಡುತ್ತವೆ ಎಂದು ರಾಹುಲ್​ ಗಾಂಧಿ ಆರೋಪಿಸಿದರು.

ಎಲ್​ ಡಿಎಫ್​ ಸರ್ಕಾರದ ವಿರುದ್ಧವೂ ವಾಕ್ಸಮರ; ಸ್ಥಳೀಯ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಅವರು, ಕೊಟ್ಟಾಯಂ ಜಿಲ್ಲೆಯ ಜನಪ್ರಿಯ ವಾಣಿಜ್ಯ ಬೆಳೆ ರಬ್ಬರ್ ಕೃಷಿಗೆ, ಈ ಹಿಂದೆ ಎಲ್‌ಡಿಎಫ್ ಸರ್ಕಾರ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. 2016 ರಲ್ಲಿ ಎಲ್‌ಡಿಎಫ್ ರಬ್ಬರ್ ಬೆಲೆಯನ್ನು ಕೆಜಿಗೆ 250 ರೂ.ಗೆ ನಿಗದಿಪಡಿಸುವುದಾಗಿ ಭರವಸೆ ನೀಡಿತು. 2026 ರಲ್ಲಿ ಅವರು 200 ರೂ. ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಪ್ರಸ್ತುತ ಮಾರುಕಟ್ಟೆ ಬೆಲೆ ಸುಮಾರು 220 ರೂ. ಇದೆ ಎಂದರು. ಕಾಂಗ್ರೆಸ್ ರೈತರ ಕಲ್ಯಾಣಕ್ಕೆ ಆದ್ಯತೆ ನೀಡುತ್ತದೆ ಮತ್ತು ಬೆಲೆ ಸ್ಥಿರತೆಯನ್ನು ಖಚಿತಪಡಿಸುತ್ತದೆ ಎಂದು ಅವರು ಇದೇ ವೇಳೆ ಕೊಟ್ಟಾಯಂ ಮತದಾರರಿಗೆ ಭರವಸೆ ನೀಡಿದರು.

ನಾವು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ರೈತರನ್ನು ರಕ್ಷಿಸುವುದು ಮತ್ತು ಅವರ ಜೀವನೋಪಾಯವನ್ನು ಸುಧಾರಿಸುವುದು ನಮ್ಮ ಗುರಿಯಾಗಿದೆ. ಯುಡಿಎಫ್ ಸರ್ಕಾರದ ಮೊದಲ ನಿರ್ಧಾರ ಎಂದರೆ ರಬ್ಬರ್ ಬೆಲೆಯನ್ನು 250 ರೂ.ಗೆ ನಿಗದಿಪಡಿಸುವುದು ಎಂದು ಅವರು ಇದೇ ವೇಳೆ ಘೋಷಿಸಿದರು. ರಬ್ಬರ್ ಬೆಲೆಯನ್ನು ಹಂತ ಹಂತವಾಗಿ 300 ರೂ.ಗೆ ಹೆಚ್ಚಿಸುವ ಉದ್ದೇಶವನ್ನು ಪಕ್ಷದ ಪ್ರಣಾಳಿಕೆ ಹೊಂದಿದೆ ಎಂದು ಇದೇ ವೇಳೆ ಗಾಂಧಿ ಭರವಸೆ ನೀಡಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ರಬ್ಬರ್​ ಬೆಲೆ 250 ರೂ.ಗಳಿಗೆ ಏರಿಕೆಯಾಗುವಂತೆ ಮಾಡುತ್ತೇವೆ. ಬಳಿಕ ಅದನ್ನು ಹಂತ ಹಂತವಾಗಿ ಏರಿಕೆ ಮಾಡುತ್ತೇವೆ ಎಂದು ಅವರು ವಾಗ್ದಾನ ಮಾಡಿದರು.

ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ 50 ವರ್ಷಗಳಿಗೂ ಹೆಚ್ಚು ಕಾಲ ಪುತ್ತುಪ್ಪಳ್ಳಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರಿಂದ ತಾವು ಅಲ್ಲಿ ಪ್ರಚಾರ ಮಾಡುತ್ತಿರುವುದಾಗಿ ರಾಹುಲ್​ ಹೇಳಿದರು. ಆರೋಗ್ಯ ಸಮಸ್ಯೆಗಳ ಹೊರತಾಗಿಯೂ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಚಾಂಡಿ ಅವರು ನಮ್ಮೊಂದಿಗೆ ಹಜ್ಜೆ ಹಾಕಿದ್ದರು ಎಂದು ನೆನಪಿಸಿಕೊಂಡರು. ಚಾಂಡಿ ಅವರ ಮಗ ಮತ್ತು ಹಾಲಿ ಶಾಸಕ ಚಾಂಡಿ ಉಮ್ಮನ್ ಪುತ್ತುಪ್ಪಳ್ಳಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!