ಉದಯವಾಹಿನಿ, ಛತ್ರಪತಿ ಸಂಭಾಜಿನಗರ(ಮಹಾರಾಷ್ಟ್ರ): ಕ್ಷುಲ್ಲಕ ಕಾರಣಕ್ಕೆ ವ್ಯಾನ್‌ನಲ್ಲಿದ್ದ ಅಪರಿಚಿತ ವ್ಯಕ್ತಿಗಳು ಸರಕು ಸಾಗಣೆ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿ, ಆತನ ಜನನಾಂಗ ಕತ್ತರಿಸಿದ್ದಾರೆ. ಮಹಾರಾಷ್ಟ್ರದ ಗಂಗಾಪುರ-ಲಾಸೂರ್ ರಸ್ತೆಯ ಶಿಂದೇವಾಡಿ ಗ್ರಾಮದ ಬಳಿ ಶನಿವಾರ ರಾತ್ರಿ ಘಟನೆ ನಡೆದಿದೆ.
ಹಲ್ಲೆಗೊಳಗಾದ 32 ವರ್ಷದ ವ್ಯಕ್ತಿ ತನ್ನ ಮಿನಿ ಪಿಕಪ್ ವಾಹನದಲ್ಲಿ ಸರಕುಗಳನ್ನು ಇಳಿಸಿ ಸ್ನೇಹಿತನೊಂದಿಗೆ ಹಿಂತಿರುಗುತ್ತಿದ್ದಾಗ ತಾಂತ್ರಿಕ ಸಮಸ್ಯೆಯಿಂದಾಗಿ ತಿರುವಿನಲ್ಲಿ ವಾಹನ ನಿಂತಿದೆ. ಆದೇ ಸಮಯದಲ್ಲಿ ಹಾದುಹೋಗುತ್ತಿದ್ದ ವ್ಯಾನ್ ಡಿಕ್ಕಿಯಾಗುವುದನ್ನು ತಪ್ಪಿಸಿದೆ. ಬಳಿಕ ಎರಡು ವಾಹನಗಳಲ್ಲಿದ್ದವರ ನಡುವೆ ಜಗಳ ಶುರುವಾಗಿ ವಿಕೋಪಕ್ಕೆ ತಿರುಗಿದೆ. ಬಳಿಕ ಸರಕು ಸಾಗಣೆ ವಾಹನ ಚಾಲಕ ಹತ್ತಿರದ ಹೊಲಕ್ಕೆ ಓಡಿದ್ದಾನೆ.
ಚಾಲಕನನ್ನು ಬೆನ್ನಟ್ಟಿದ ವ್ಯಾನ್‌ನಲ್ಲಿದ್ದ ಏಳು ಮಂದಿ, ಆತನಿಗೆ ಥಳಿಸಿ ಜನನಾಂಗ ಕತ್ತರಿಸಿ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ನಂತರ ಹಲ್ಲೆಗೊಳಗಾದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಗಂಗಾಪುರ ಉಪ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಸಂಬಂಧ ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಕೃತ್ಯದಲ್ಲಿ ಆರೇಳು ಮಂದಿ ಭಾಗಿಯಾಗಿದ್ದಾರೆಂದು ತಿಳಿದು ಬಂದಿದೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದೇವೆ ಎಂದು ಗಂಗಾಪುರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೈಕ್ ಸವಾರನ ಮೇಲೆ ವಾಟರ್ ಬಲೂನ್ ಎಸೆದ ಕಾರಿನಲ್ಲಿದ್ದ ಬಾಲಕ(ಪ್ರತ್ಯೇಕ ಘಟನೆ): ಫ್ಲೈಓವರ್ ಮೇಲೆ ಸಾಗುತ್ತಿದ್ದ ಬೈಕ್ ಸವಾರನ ಮೇಲೆ ಕಾರಿನಲ್ಲಿ ಕುಳಿತಿದ್ದ ಬಾಲಕ ವಾಟರ್ ಬಲೂನ್ ಎಸೆದಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ಕಳವಳ ಉಂಟುಮಾಡಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡ ಒಂದು ನಿಮಿಷದ ವಿಡಿಯೋವನ್ನು ಸಾಮಾಜಿಕ ಕಾರ್ಯಕರ್ತೆ ದಿವ್ಯಾ ಟಂಡನ್ ಅವರು ಎಕ್ಸ್ನಲ್ಲಿ ಹಂಚಿಕೊಂಡಿದ್ದರು.
ದೆಹಲಿ ನೋಂದಣಿ ಸಂಖ್ಯೆ DL2CBF0214 ಹೊಂದಿರುವ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಬಾಲಕ ಬೈಕ್ ಸವಾರರ ಮೇಲೆ ವಾಟರ್ ಬಲೂನ್ ಎಸೆದಿದ್ದಾನೆ. ಇದರಿಂದ ಸವಾರ ಆಯತಪ್ಪಿ ಫ್ಲೈಓವರ್‌ನಿಂದ ಕೆಳ ಬೀಳುವ ಅಪಾಯವಿತ್ತು. ಈ ದೃಶ್ಯ ಸೆರೆ ಹಿಡಿದ ಮತ್ತೊಬ್ಬ ಬೈಕ್ ಸವಾರ, ಬಾಲಕನ ಕೃತ್ಯದ ಬಗ್ಗೆ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತ ಮಹಿಳೆಗೆ ಕೇಳುತ್ತಿದ್ದಂತೆ, ಆಕೆ ಬೇಜವಾಬ್ದಾರಿಯಿಂದ ನಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ಬೈಕ್ ಸವಾರ ಕಾರು ನಿಲ್ಲಿಸುವಂತೆ ಹೇಳಿದರೂ ಚಾಲಕ ಲೆಕ್ಕಿಸದೆ ತೆರಳಿದ್ದ.
“ಇದು ತಮಾಷೆಯಲ್ಲ. ಅಪರಾಧ. ಈ ಕಾರಿನ (DL2CBF0212) ಹಿಂಬದಿ ಸೀಟಿನಲ್ಲಿ ಕುಳಿತ ಬಾಲಕ ಫ್ಲೈಓವರ್ ಮೇಲೆ ಬೈಕ್ ಸವಾರರ ಮೇಲೆ ವಾಟರ್ ಬಲೂನ್ ಎಸೆದಿದ್ದಾನೆ. ಇದರಿಂದ ಬೈಕ್ ಸವಾರ ಮೇಲಿಂದ ಬೀಳುವ ಅಪಾಯವಿತ್ತು. ಇದು ತಮಾಷೆ ಅಲ್ಲ, ಸಾವೂ ಸಂಭವಿಸಬಹುದಿತ್ತು. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಮುಂದಿನ ಸೀಟಿನಲ್ಲಿದ್ದ ಮಹಿಳೆ ನಗುತ್ತಿದ್ದರು. ಅಜಾಗರೂಕ ಅಪಾಯ. ಇಂತಹ ಕೃತ್ಯದಿಂದ ಯಾರಾದರೂ ಪ್ರಾಣ ಕಳೆದುಕೊಳ್ಳುವ ಮೊದಲು ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಟಂಡನ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಆಗ್ರಹಿಸಿದ್ದರು.
