ಉದಯವಾಹಿನಿ, ಕೋಲ್ಕತ್ತಾ(ಪಶ್ಚಿಮ ಬಂಗಾಳ): ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕಳೆದ ಉಪಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು ಸ್ಪರ್ಧಿಸಿ ಗೆದ್ದ ಭವಾನಿಪುರ ಕ್ಷೇತ್ರದಿಂದ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯ ಬಿಜೆಪಿ ವರಿಷ್ಠ ಸುವೇಂದು ಅಧಿಕಾರಿ ಕಣಕ್ಕಿಳಿದಿದ್ದಾರೆ. ಇದರೊಂದಿಗೆ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಕ್ಷೇತ್ರ ಸಾಕ್ಷಿಯಾಗಲಿದೆ.

2021ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ತವರು ಕ್ಷೇತ್ರ ನಂದಿಗ್ರಾಮ್‌ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ತಮ್ಮ ಶಿಷ್ಯ ಸುವೇಂದು ಅಧಿಕಾರಿ ವಿರುದ್ಧ ಸೋಲು ಕಂಡಿದ್ದರು. ನಂತರ ಅವರು ಭವಾನಿಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಟಿಎಂಸಿ, ಬಿಜೆಪಿ ತಂತ್ರಗಾರಿಕೆ ಹೇಗಿದೆ?: ಇದೀಗ ತೃಣಮೂಲ ಕಾಂಗ್ರೆಸ್​ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಬಿಜೆಪಿ ಈ ಭದ್ರಕೋಟೆಯನ್ನು ಭೇದಿಸಲು ಪಣ ತೊಟ್ಟಿದೆ. ಒಂದೆಡೆ ಟಿಎಂಸಿ ಸಂಘಟನಾ ಶಕ್ತಿಯನ್ನು ನಂಬಿಕೊಂಡಿದ್ದರೆ, ಮತ್ತೊಂದೆಡೆ ಬಿಜೆಪಿ ಜಾತಿ ಲೆಕ್ಕಾಚಾರ, ರಾಮರಾಜ್ಯ ಮತ್ತು ಬೂತ್ ಮಟ್ಟದ ಸಾಮಾಜಿಕ ಧ್ರುವೀಕರಣದ ಮೂಲಕ ಮಮತಾರರನ್ನು ಸೋಲಿಸಲು ತಂತ್ರಗಾರಿಕೆ ಹೆಣೆಯುತ್ತಿದೆ.

ರಾಜ್ಯ ಟಿಎಂಸಿ ಅಧ್ಯಕ್ಷ ಸುಬ್ರತಾ ಬಕ್ಷಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯತಂತ್ರ ಸಭೆಯಲ್ಲಿ, ‘ಬಾಂಗ್ಲಾರ್ ಉನ್ನಯನ್ ಘೋರೆ ಘೋರೆ, ಘೋರೆರ್ ಮೆಯೆ ಭಬಾನಿಪುರೆ’ ಎಂಬ ಘೋಷಣೆಯನ್ನು ಪ್ರಚಾರ ಮಾಡುವಂತೆ ಕೌನ್ಸಿಲರ್‌ಗಳಿಗೆ ಸೂಚಿಸಲಾಗಿದೆ. ಈ ಘೋಷಣೆಯ ಅರ್ಥ ಭಬಾನಿಪುರ ಕೇವಲ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಿಲ್ಲ, ಅದು ತನ್ನ ಸ್ವಂತ ಮಗಳ ಪರವಾಗಿ ನಿಂತಿದೆ ಎಂಬುದಾಗಿದೆ. ಇದರ ಜೊತೆಗೆ ಕೌನ್ಸಿಲರ್‌ಗಳಿಗೆ ಮನೆ ಮನೆಗೆ ಹೋಗಿ ಬ್ಯಾನರ್ಜಿ ಅವರ ಅಭಿವೃದ್ಧಿ ಕಾರ್ಯಗಳನ್ನು ವಿವರಿಸುವ ಕರಪತ್ರಗಳನ್ನು ವಿತರಿಸಲೂ ತಿಳಿಸಲಾಗಿದೆ.

ಟಿಎಂಸಿ ಕ್ಷೇತ್ರದಾದ್ಯಂತ ಮೂಲೆ ಮೂಲೆಯಲ್ಲೂ ಮಮತಾ ಪರ ಭಿತ್ತಿಪತ್ರಗಳನ್ನು ಮತ್ತು ಛಾಯಚಿತ್ರಗಳನ್ನು ಅಂಟಿಸಿದೆ. ಮಮತಾ ಅವರ ಆಳೆತ್ತರದ ಕಟೌಟ್‌ ನಿಲ್ಲಿಸಲಾಗಿದ್ದು, ಅಲ್ಲಿ ಜನರು ಕಟೌಟ್‌ ಪಕ್ಕ ನಿಂತು ಪೋಸ್ ಕೊಟ್ಟು, ಫೋಟೋ ಕ್ಲಿಕ್ಕಿಸಿಕೊಳ್ಳಬಹುದಾಗಿದೆ. ಬ್ಯಾನರ್ಜಿ ನಿವಾಸವಿರುವ ವಾರ್ಡ್ 73ರ ಮುಕ್ತದಲ್ ಮೋರ್‌ನಲ್ಲಿ ಮೊದಲ ಬೂತ್ ನಿರ್ಮಿಸಲಾಗಿದ್ದು, “ಮಮತಾ ಬ್ಯಾನರ್ಜಿಯ ಪಕ್ಕದಲ್ಲಿ ನಿಂತುಕೊಳ್ಳಿ, ಚಿತ್ರ ತೆಗೆದುಕೊಳ್ಳಿ, ಬಂಗಾಳಕ್ಕಾಗಿ ಮಾತನಾಡಿ” ಎಂಬ ಘೋಷಣೆ ಬರೆಯಲಾಗಿದೆ.”ನಾವು ಈ ಚುನಾವಣೆಯಲ್ಲಿ ಆಕ್ರಮಣಶೀಲತೆಯಿಂದ ಹೋರಾಡುತ್ತಿಲ್ಲ. ನಾವು ಭಾವನೆಯೊಂದಿಗೆ, ಸಂಪರ್ಕದೊಂದಿಗೆ ಮತ್ತು ಬ್ಯಾನರ್ಜಿ ಭಬಾನಿಪುರದಲ್ಲಿ ಮಾಡಿದ ಅಭಿವೃದ್ಧಿ ಕೆಲಸದೊಂದಿಗೆ ಎದುರಿಸುತ್ತಿದ್ದೇವೆ” ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!