ಉದಯವಾಹಿನಿ, ಸಿಕಾರ್ (ರಾಜಸ್ಥಾನ): ಸಿಕಾರ್ ಜಿಲ್ಲೆಯ ಗುಹಾಲಾ ಗ್ರಾಮದ ಹಿಂದೂ ಕುಟುಂಬವೊಂದು ಮುಸ್ಲಿಮರ ಪ್ರಾರ್ಥನಾ ಸ್ಥಳವಾದ ಸ್ಥಳೀಯ ಈದ್ಗಾವನ್ನು ವಿಸ್ತರಿಸಲು ತಮ್ಮ ಸ್ವಂತ ಭೂಮಿಯನ್ನು ದಾನ ಮಾಡುವ ಮೂಲಕ ಕೋಮು ಸೌಹಾರ್ದತೆಗೆ ಮಾದರಿಯಾಗಿದೆ. ಧರ್ಮ- ಜಾತಿಗಳ ಆಚೆಗೆ ಸಮಾಜದಲ್ಲಿ ಮನುಷ್ಯತ್ವ ಉಸಿರಾಡುತ್ತಲೇ ಇರುತ್ತದೆ ಎನ್ನುವುದಕ್ಕೆ ಉದಾಹರಣೆ ಆಗಿದ್ದಾರೆ.
ನೀಮ್ಕಥಾನಾ ಪ್ರದೇಶದಲ್ಲಿರುವ ಈ ಗ್ರಾಮವು ಸುಮಾರು 7,000 ಜನಸಂಖ್ಯೆಯನ್ನು ಹೊಂದಿದ್ದು, ಭಾರತದ ಏಕತೆ ಮತ್ತು ಸಾಮರಸ್ಯದ ನಿಜವಾದ ಪ್ರತಿಬಿಂಬ ಎಂದು ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಗುಹಾಲಾ ಈಗಾಗಲೇ ಮುಸ್ಲಿಮರು, ಪರಿಶಿಷ್ಟರು, ಸೈನಿಗಳು ಮತ್ತು ಇತರರು ಸೇರಿದಂತೆ ಮೂವತ್ತಾರು ಸಮುದಾಯಗಳನ್ನು ಒಳಗೊಂಡಿರುವ ಪುಟ್ಟ ಗ್ರಾಮವಾಗಿದ್ದು, ಸ್ಥಳೀಯರಲ್ಲಿನ ಸಹಕಾರ, ಸಾಮಾಜಿಕ ಸಾಮರಸ್ಯ ಮತ್ತು ಶಾಂತಿಯ ಹಿನ್ನೆಲೆಯಲ್ಲಿ ಗಮನ ಸೆಳೆಯುತ್ತಿದೆ. ಸ್ಥಳಾವಕಾಶದ ಕೊರತೆಯಿಂದ ಬಳಲುತ್ತಿದ್ದ ಈದ್ಗಾ: ಸುಮಾರು 7,000 ಜನಸಂಖ್ಯೆಯನ್ನು ಹೊಂದಿರುವ ಗುಹಾಲಾ ಗ್ರಾಮದಲ್ಲಿನ ಈ ಈದ್ಗಾ ತೀರಾ ಹಳೆಯದಾಗಿದೆ. ಆಗಿನ ಕಾಲದಲ್ಲಿ ಜನರು ಬಂದು ಪ್ರಾರ್ಥನೆ ಮಾಡಿ ಹೋಗಬಹುದಿತ್ತು. ಆದರೆ, ಇತ್ತೀಚೆಗೆ ಮುಸ್ಲಿಂ ಸಮುದಾಯದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರಿಂದ ಸ್ಥಳಾವಕಾಶದ ಕೊರತೆಯಿಂದ ಬಳಲುತ್ತಿತ್ತು. ವಿಶೇಷವಾಗಿ ಈದ್ ಸಮಯದಲ್ಲಿ, ಸುತ್ತಮುತ್ತಲಿನ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯ ಜನರು ಪ್ರಾರ್ಥನೆ ಸಲ್ಲಿಸಲು ಆಗಮಿಸುತ್ತಿದ್ದರು. ಇದರಿಂದಾಗಿ ಜನರು ನಿಲ್ಲಲು ಸಹ ಸ್ಥಳವಿಲ್ಲದಂತಾಗುತ್ತಿತ್ತು. ಈ ಸಮಸ್ಯೆಯನ್ನು ಗಮನಿಸಿದ ಹಿಂದೂ ಕುಟುಂಬದ ಭೋಪಾಲ್ ರಾಮ್ ಸೈನಿ, ಪುರಾನ್ಮಲ್ ಸೈನಿ ಮತ್ತು ಅವರ ಸಹೋದರರು ಮುಂದೆ ಬಂದು ತಮ್ಮ ಭೂಮಿಯನ್ನು ದಾನ ಮಾಡಲು ನಿರ್ಧರಿಸಿದ್ದರು. ಅದರಂತೆ ಈದ್ಗಾವನ್ನು ವಿಸ್ತರಿಸಲು ತಮ್ಮ ಭೂಮಿಯನ್ನು ದಾನ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!