ಉದಯವಾಹಿನಿ, ಇರಾನ್ ಜೊತೆಗಿನ ಸಂಘರ್ಷಕ್ಕೆ ತಾತ್ಕಾಲಿಕ ಕದನ ವಿರಾಮ ನೀಡಿರುವ ನಡುವೆಯೇ ಅಮೆರಿಕ, ದೊಡ್ಡ ಭೂದಾಳಿಗೆ ಮುಂದಾಗಿದೆ ಎಂದು ವರದಿಯಾಗಿದೆ. ಸಾವಿರಾರು ಅಮೆರಿಕನ್ ಸೈನಿಕರು ಮತ್ತು ನೌಕಾಪಡೆಗಳು ಮಧ್ಯಪ್ರಾಚ್ಯಕ್ಕೆ ಆಗಮಿಸುತ್ತಿದ್ದು, ಇನ್ನೊಂದು ಸುತ್ತಿನ ಅಪಾಯಕಾರಿ ಯುದ್ಧ ಆರಂಭವಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಮಾಧ್ಯಮಗಳು ಹೇಳಿವೆ.
ವಿಶೇಷ ಕಾರ್ಯಾಚರಣೆ ಪಡೆಗಳು ಮತ್ತು ಸಾಂಪ್ರದಾಯಿಕ ಭೂ ಸೇನೆಯ ಜೊತೆಗೂಡಿ ಈ ದಾಳಿ ನಡೆಯಬಹುದು ಎಂದು ಅನಾಮಧೇಯ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಮಾಧ್ಯಮವು ಇಂದು (ಭಾನುವಾರ) ವರದಿ ಮಾಡಿದೆ.ಈ ಭೂ ಕಾರ್ಯಾಚರಣೆ ಇರಾನ್‌ನ ಡ್ರೋನ್, ಕ್ಷಿಪಣಿ ವ್ಯವಸ್ಥೆ, ಸುಧಾರಿತ ಸ್ಫೋಟಕಗಳು, ಇತರ ಶಸ್ತ್ರಾಗಾರಗಳನ್ನು ನಾಶಪಡಿಸುವ ಗುರಿ ಹೊಂದಿದೆ ಎಂದು ವರದಿ ಹೇಳಿದೆ. ಕೆಲ ದಿನಗಳ ಹಿಂದೆ ಟ್ರಂಪ್ ಸರ್ಕಾರ, ಯುದ್ಧವನ್ನು ಕೊನೆಗೊಳಿಸುವ ಸುಳಿವು ನೀಡಿತ್ತು. ಆದರೆ, ಈ ಬೆಳವಣಿಗೆಗಳು ಸಂಘರ್ಷ ಇನ್ನಷ್ಟು ಭೀಕರತೆ ಪಡೆಯುವ ಎಲ್ಲ ಲಕ್ಷಣಗಳನ್ನು ತೋರಿಸುತ್ತಿದೆ.
ಖಾರ್ಗ್ ದ್ವೀಪ ವಶ ಗುರಿ?: ವರದಿಯ ಪ್ರಕಾರ, ಪರ್ಷಿಯನ್ ಕೊಲ್ಲಿಯಲ್ಲಿ ಇರಾನ್‌ನ ಅತ್ಯಂತ ಕಾರ್ಯತಂತ್ರದ ಸ್ಥಳ, ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದು ಈ ಭೂ ದಾಳಿಯ ಮುಖ್ಯ ಉದ್ದೇಶ ಎಂದು ಹೇಳಲಾಗಿದೆ.
ಈ ದ್ವೀಪವು ಇರಾನ್‌ನ ಪ್ರಮುಖ ಆರ್ಥಿಕ ನೆಲೆಯಾಗಿದೆ. ಇದರ ನಾಶ ಅಥವಾ ವಶವು ಆ ದೇಶದ ಬೆನ್ನೆಲುಬನ್ನೇ ಮುರಿದಂತಾಗುತ್ತದೆ. ವಿಶ್ವಕ್ಕೆ ತೈಲ ಮತ್ತು ಸರಕು ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ ನಿಯಂತ್ರಿಸುತ್ತಿದೆ. ಇದನ್ನು ತಪ್ಪಿಸುವುದರ ಜೊತೆಗೆ ಖಾರ್ಗ್ ದ್ವೀಪ ವಶಪಡಿಸಿಕೊಂಡಲ್ಲಿ ಅದರ ಸಂಪೂರ್ಣ ಬಲ ಕುಗ್ಗಲಿದೆ.
ಇನ್ನೂ ಎರಡು ತಿಂಗಳು ಯುದ್ಧ?: ವಾಷಿಂಗ್ಟನ್ ಪೋಸ್ಟ್ ವರದಿಯಲ್ಲಿ ಅಮೆರಿಕದ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಈ ಯುದ್ಧವು ಬಹುಶಃ ವಾರಗಳಲ್ಲ, ಇನ್ನೂ ಎರಡು ತಿಂಗಳು ನಡೆಯುವ ಸಾಧ್ಯತೆಯನ್ನು ಅವರು ಇಲ್ಲಿ ತಿಳಿಸಿದ್ದಾರೆ.
ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು, “ಭೂ ದಾಳಿ ನಡೆಸದೆ ನಮ್ಮ ಉದ್ದೇಶಗಳನ್ನು ಸಾಧಿಸಬಹುದು” ಎಂದಿದ್ದರು. ಆದರೆ, “ತೆರೆಮರೆಯಲ್ಲಿ ಸೇನಾ ದಾಳಿಯನ್ನು ಮೊದಲೇ ಯೋಜಿಸಲಾಗಿತ್ತು” ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ.ಸನ್ನದ್ಧ ಸ್ಥಿತಿಯಲ್ಲಿ ಪಡೆಗಳು: 3,500 ಸೈನಿಕರು ಮತ್ತು ನಾವಿಕರ ಕಾರ್ಯಪಡೆ ಮಧ್ಯಪ್ರಾಚ್ಯಕ್ಕೆ ಆಗಮಿಸಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಘೋಷಿಸಿದೆ. ಮಾರ್ಚ್ 27 ರಂದು ಯುಎಸ್ಎಸ್ ಟ್ರಿಪೋಲಿ (LHA 7) ಯುದ್ಧ ನೌಕೆಯಲ್ಲಿ ಸೈನಿಕರು ಆಗಮಿಸಿದ್ದಾರೆ ಎಂದು ಅದು ತಿಳಿಸಿದೆ.
ಯುಎಸ್ಎಸ್ ಟ್ರಿಪೋಲಿ, ಉಭಯಚರ ದಾಳಿ (ಭೂಮಿ ಮತ್ತು ನೀರು) ಹಡಗಾಗಿದೆ. ಅದರಲ್ಲಿರುವ 31 ನೇ ಸಾಗರ ದಂಡಯಾತ್ರೆಯ ಪಡೆಯು ಜಪಾನ್‌ನಲ್ಲಿ ನೆಲೆಗೊಂಡಿದೆ. ಎರಡು ವಾರಗಳ ಹಿಂದೆ ತೈವಾನ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸಮರಭ್ಯಾಸ ನಡೆಸುತ್ತಿತ್ತು ಎಂದು ಹೇಳಲಾಗಿದೆ.
