ಉದಯವಾಹಿನಿ, ಸಿನಿಮಾ ಪತ್ರಕರ್ತರ ಹೆಮ್ಮೆಯ 7ನೇ ವರ್ಷದ ಚಂದನವನ ಫಿಲ್ಮ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು. 2025ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಆಯ್ದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಟ್ಟು 26 ವಿಭಾಗಗಳಲ್ಲಿ ಪ್ರಶಸ್ತಿ ವಿತರಿಸಲಾಯಿತು.
ಅತ್ಯುತ್ತಮ ನಟ ಪ್ರಶಸ್ತಿಯು ಕಾಂತಾರ ಚಾಪ್ಟರ್-1 ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಪಾಲಾದರೆ, ಅತ್ಯುತ್ತಮ ನಟಿ ಪ್ರಶಸ್ತಿಯು ಗತ ವೈಭವ ಚಿತ್ರದ ನಟನೆಗಾಗಿ ಆಶಿಕಾ ರಂಗನಾಥ್ ಪಡೆದರು. 2025ನೇ ಸಾಲಿನ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಕಾಂತಾರ ಅಧ್ಯಾಯ-1 ರ ಪಾಲಾಯಿತು. ಕಾಂತಾರ ಸಿನಿಮಾ ಒಟ್ಟು 9 ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು. 3 ಟ್ರೋಫಿಗಳಿಗೆ ಡಿವೈನ್ ಸ್ಟಾರ್ ರಿಷಬ್ ಮುತ್ತಿಟ್ಟಿದ್ದು ವಿಶೇಷವಾಗಿತ್ತು.
ಜೊತೆಗೆ ಕನ್ನಡದ ಟಾಕಿ ಚಿತ್ರಗಳ ಪ್ರಥಮ ನಾಯಕ ಸುಬ್ಬಯ್ಯ ನಾಯ್ಡು ಅವರ ಮರಿಮೊಮ್ಮಗ ಸುಕ್ರತ್ ಸೃಜನ್ ಲೋಕೇಶ್ ಅವರಿಗೆ ವಿಶೇಷ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೀವಮಾನ ಸಾಧನೆಯ ಗೌರವವನ್ನು ಹಿರಿಯ ನಿರ್ದೇಶಕ ರಾಜೇಂದ್ರ್ ಸಿಂಗ್ ಬಾಬು ಅವರಿಗೆ ನೀಡಲಾಯಿತು.
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಈ ಅದ್ಧೂರಿ ಹಾಗೂ ವರ್ಣರಂಜಿತ ಸಮಾರಂಭವನ್ನ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧ, ಹೆಸರಾಂತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಖ್ಯಾತ ನಿರ್ದೇಶಕ ಬಿ.ಸುರೇಶ್, ಹಿರಿಯ ನಟಿ ಗಿರಿಜಾ ಲೋಕೇಶ್, ಖ್ಯಾತ ನಟಿ ಪೂಜಾ ಗಾಂಧಿ, ನಟಿ ಹಾಗೂ ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ, ಖ್ಯಾತ ನಟ ಮಾಸ್ಟರ್ ಮಂಜುನಾಥ್ ಟೈಟಲ್ ಸ್ಪಾನ್ಸರ್ ಅಂಬರ್ಸ್ಟೋನ್ ಪ್ರಾಪರ್ಟೀಸ್ ಮ್ಯಾನೇಜಿಂಗ್ ಡೈರೆಕ್ಟರ್ ಯಶ್ವಂತ್ ಕುಮಾರ್, ಕಿರಣ್ ಕುಮಾರ್, ಕೀರ್ತಿ, ಅಶ್ವಸೂರ್ಯ ರಿಯಾಲಿಟಿಸ್ ಡೈರೆಕ್ಟರ್ ಎಸ್ ರಂಜಿತ್ ಕುಮಾರ್ ಅಲೈನ್ಸ್ ಯೂನಿವರ್ಸಿಟಿಯ ರೆಜಿಸ್ಟರ್ ಸುರೇಖಾ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು. ಟೈಟಲ್ ಸ್ಪಾನ್ಸರ್ ಆಗಿ ಅಂಬರ್ಸ್ಟೋನ್ ಪ್ರಾಪರ್ಟೀಸ್ ಹಾಗೂ ಕೋ ಸ್ಪಾನ್ಸರ್ ಆಗಿ ಅಶ್ವಸೂರ್ಯ ರಿಯಾಲಿಟಿಸ್ ಪ್ರಶಸ್ತಿ ಸಮಾರಂಭಕ್ಕೆ ಜೊತೆಯಾಗಿತ್ತು.
