ಉದಯವಾಹಿನಿ, ಗಾಂಧಿನಗರ (ಗುಜರಾತ್): ಮಹಾವೀರ್ ಜಯಂತಿ ಹಿನ್ನೆಲೆಯಲ್ಲಿಇಲ್ಲಿನ ಗಾಂಧಿನಗರದ ಮಹಾವೀರ ಜೈನ ಆರಾಧನಾ ಕೇಂದ್ರದ ಆವರಣದಲ್ಲಿರುವ ಕೋಬಾ ತೀರ್ಥದಲ್ಲಿ ನಿರ್ಮಾಣವಾಗಿರುವ ಸಾಮ್ರಾಟ್ ಸಂಪ್ರತಿ ಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.
ಅಶೋಕನ ಮೊಮ್ಮಗ ಸಾಮ್ರಾಟ್ ಸಂಪ್ರತಿಯ ಹೆಸರನ್ನು ಈ ವಸ್ತುಸಂಗ್ರಹಾಲಯಕ್ಕೆ ಇಡಲಾಗಿದ್ದು, ಇದು ಜೈನ ಧರ್ಮದ ಶ್ರೀಮಂತ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ. ಈ ವಸ್ತು ಸಂಗ್ರಹಾಲಯವು ಪ್ರಾಚೀನ ಹಸ್ತಪ್ರತಿಗಳು, ವಿಗ್ರಹಗಳು, ವರ್ಣಚಿತ್ರಗಳು ಮತ್ತು ಸಾಂಪ್ರದಾಯಿಕ ಅವಶೇಷಗಳನ್ನು ಒಳಗೊಂಡಿದ್ದು, 2,000 ಕ್ಕೂ ಹೆಚ್ಚು ಅಪರೂಪದ ಕಲಾಕೃತಿಗಳನ್ನು ಹೊಂದಿದೆ.
ಈ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ವಸ್ತುಸಂಗ್ರಹಾಲಯವು ಭಾರತಕ್ಕೆ ಮಾತ್ರವಲ್ಲದೆ ಎಲ್ಲಾ ಮಾನವೀಯತೆಗೆ ಹೇಗೆ ಅಪಾರ ಮಹತ್ವವನ್ನು ಹೊಂದಿದೆ. ಇದು ಕೋಟ್ಯಂತರ ಭಾರತೀಯರ ಪರಂಪರೆಯಾಗಿದೆ. ಇದು ಅದ್ಭುತ ಇತಿಹಾಸ ಹೊಂದಿದ್ದು, ಸಾಮ್ರಾಟ್ ಸಂಪ್ರತಿ ಅಹಿಂಸೆ ಮತ್ತು ಸತ್ಯವನ್ನು ಹರಡಿದರು. ಈ ವಸ್ತುಸಂಗ್ರಹಾಲಯವನ್ನು ಭವ್ಯ ಭಾರತದ ಗುರುತನ್ನು ಪ್ರದರ್ಶಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಸ್ಥಳಕ್ಕೆ ಭೇಟಿ ನೀಡುವವರು ಭಾರತದ ಜೈನ ಸಂಪ್ರದಾಯದ ಬೋಧನೆಗಳನ್ನು ಪ್ರಪಂಚದ ಮೂಲೆ ಮೂಲೆಗೆ ಹರಡಲಿ ಎಂದರು.
ಹಲವು ಅಭಿವೃದ್ಧಿ ಯೋಜನೆಗೆ ಚಾಲನೆ: ಈ ಬೆನ್ನಲ್ಲೇ ಅವರು 20,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
5,100 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾದ ಅಹಮದಾಬಾದ್ ಧೋಲೇರಾ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಲಿದ್ದಾರೆ. ಗಾಂಧಿನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಕೋಬಾ ವಿಮಾನ ನಿಲ್ದಾಣ ರಸ್ತೆಯ ಭೈಜಿಪುರ ಜಂಕ್ಷನ್‌ನವರೆಗೆ ಮೇಲ್ಸೇತುವೆ ಸೇರಿದಂತೆ ಪ್ರಮುಖ ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಲಿದ್ದಾರೆ.ಈ ರಸ್ತೆ ಅಭಿವೃದ್ಧಿ ಕಾರ್ಯದ ಜೊತೆಗೆ 3,650 ಕೋಟಿ ವೆಚ್ಚದ ಪ್ರಮುಖ ವಿದ್ಯುತ್ ಪ್ರಸರಣ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆಗಳು ನವೀಕರಿಸಬಹುದಾದ ಇಂಧನ ಏಕೀಕರಣ ಮತ್ತು ಪ್ರಸರಣ ಸಾಮರ್ಥ್ಯವನ್ನು ಬಲಪಡಿಸುತ್ತವೆ.ಇದರ ಜೊತೆಗೆ ಕನಾಲಸ್- ಜಾಮ್‌ನಗರ, ರಾಜ್‌ಕೋಟ್-ಕನಾಲಸ್ ಡಬ್ಲಿಂಗ್ ರೈಲ್ವೆ ಯೋಜನೆ ಮತ್ತು ಗಾಂಧಿಧಾಮ್- ಆದಿಪುರ ಚತುಷ್ಪಥ ಯೋಜನೆ, ಹಿಮ್ಮತ್‌ನಗರ-ಖೇಡ್‌ಬ್ರಹ್ಮ ಗೇಜ್ ಪರಿವರ್ತನೆ ಯೋಜನೆ, ಖೇಡ್‌ಬ್ರಹ್ಮ- ಹಿಮ್ಮತ್‌ನಗರ- ಅಸರ್ವ ರೈಲು ಸೇವೆಯನ್ನು ಸಹ ಉದ್ಘಾಟಿಸಲಿದ್ದಾರೆ.
