ಉದಯವಾಹಿನಿ, ಗೋಗಮುಖ್(ಅಸ್ಸಾಂ): “ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲಾಗುವುದು. ಆದರೆ, ಬುಡಕಟ್ಟು ಜನಾಂಗಗಳನ್ನು ಇದರಿಂದ ದೂರ ಇಡುತ್ತೇವೆ” ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಗೋಗಮುಖ್‌ನಲ್ಲಿಂದು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಸಮಾನತೆ ತರಲು ಏಕರೂಪ ನಾಗರಿಕ ಸಂಹಿತೆ ಅಗತ್ಯ. ವಿಶೇಷವಾಗಿ ಮಹಿಳೆಯರ ಘನತೆ ಕಾಪಾಡುವ, ಅವರ ಸುರಕ್ಷತೆ ಮತ್ತು ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಈ ದೃಢ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಬುಡಕಟ್ಟು ಜನಾಂಗಗಳಿಗೆ ವಿನಾಯಿತಿ: ಏಕರೂಪ ನಾಗರಿಕ ಸಂಹಿತೆಯಿಂದ ಅಸ್ಸಾಂನ ಬುಡಕಟ್ಟು ಜನಾಂಗಗಳು, ಆರನೇ ವೇಳಾಪಟ್ಟಿಯಲ್ಲಿ ನಮೂದಿಸಲಾದ ಪ್ರದೇಶಗಳ ಸಂಪ್ರದಾಯಗಳನ್ನು ರಕ್ಷಿಸುವುದು ಅಥವಾ ಅಸ್ಸಾಂನ ಗುರುತನ್ನು ಉಳಿಸಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಪ್ರಧಾನಿ, ಕಾಂಗ್ರೆಸ್ ವಿಭಜಕ ರಾಜಕೀಯವನ್ನು ಅನುಸರಿಸುತ್ತಿದೆ. ಅದು ಮೊದಲಿನಿಂದಲೂ ಸಮಾಜವನ್ನು ಇಬ್ಭಾಗಿಸಲು ಯತ್ನಿಸುತ್ತಲೇ ಇದೆ. ಅದಕ್ಕಾಗಿ ಮಸೂದೆಯನ್ನೂ ಪರಿಚಯಿಸಲು ಈ ಹಿಂದೆ ಪ್ರಯತ್ನಿಸಿತ್ತು ಎಂದು ಆರೋಪಿಸಿದರು.
2014ರ ಹಿಂದಿನ ಅವಧಿಯನ್ನು ಉಲ್ಲೇಖಿಸಿದ ಪ್ರಧಾನಿ, ಕಾಂಗ್ರೆಸ್ ನೇತೃತ್ವದ ಸರ್ಕಾರವು ತನ್ನ ‘ನಿರ್ದಿಷ್ಟ ಮತಬ್ಯಾಂಕ್’ ಅನ್ನು ತೃಪ್ತಿಪಡಿಸುವ ಉದ್ದೇಶದಿಂದ ಕೋಮು ಹಿಂಸಾಚಾರ ಮಸೂದೆಯನ್ನು ಪ್ರಸ್ತಾಪಿಸಿತ್ತು. ಆ ಶಾಸನವನ್ನು ಬಿಜೆಪಿ ವಿರೋಧಿಸಿತ್ತು. ಅದು ಜಾರಿಗೆ ಬಂದರೆ ಸಂಭಾವ್ಯ ಪರಿಣಾಮಗಳ ಬಗ್ಗೆ ಎಚ್ಚರಿಸಿತ್ತು ಎಂದು ನೆನಪಿಸಿದರು.
ಪ್ರಣಾಳಿಕೆಯಲ್ಲ, ಮಂಗಳ ಪತ್ರ: ಬಿಜೆಪಿಯ ಪ್ರಣಾಳಿಕೆಯ ಬಗ್ಗೆ ಮಾತನಾಡಿ, ಇದು ಕೇವಲ ಭರವಸೆಗಳುಳ್ಳ ಪ್ರಣಾಳಿಕೆಯಲ್ಲ. ಮಂಗಳಕರ ಪತ್ರವಾಗಿದೆ. ರಾಜ್ಯಕ್ಕೆ ಶುಭವನ್ನು ತರುವ ಪ್ರಣಾಳಿಕೆಯಾಗಿದೆ. ಹೀಗಾಗಿ, ಅದನ್ನು ಮಂಗಳವಾರ ಪ್ರಕಟಿಸಲಾಗಿದೆ ಎಂದರು.ಮಹಿಳೆಯರ ಜೊತೆ ಟೀ ಎಲೆ ಸಂಗ್ರಹಿಸಿದ ಪ್ರಧಾನಿ: ಇದಕ್ಕೂ ಮೊದಲು ಪ್ರಧಾನಿ ಮೋದಿ ದಿಬ್ರುಗಢದ ಟೀ ತೋಟಕ್ಕೆ ಭೇಟಿ ನೀಡಿ, ಅಲ್ಲಿನ ಮಹಿಳಾ ಕಾರ್ಮಿಕರ ಜೊತೆ ಸಂವಾದ ನಡೆಸಿ ತೋಟದಲ್ಲಿ ಟೀ ಎಲೆಗಳನ್ನು ಕಿತ್ತು ಸಂಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!