ಉದಯವಾಹಿನಿ, ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ತಿದ್ದುಪಡಿ ಮಸೂದೆಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿ ಸಂಸತ್ ಭವನದ ಮುಂದೆ ಇಂದು ಪ್ರತಿಭಟನೆ ನಡೆಸಿದವು. ತರಾತುರಿಯಲ್ಲಿ ಜಾರಿಗೆ ತರಲು ಯತ್ನಿಸುತ್ತಿರುವ ಪ್ರಸ್ತಾವಿತ ವಿಧೇಯಕವನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದವು.ಎನ್ಜಿಒಗಳು ಮತ್ತು ಇತರೆ ಸಂಸ್ಥೆಗಳನ್ನು ಗುರಿಯಾಗಿಸುವುದನ್ನು ನಿಲ್ಲಿಸಿ’ ಎಂದು ಬರೆದ ಬ್ಯಾನರ್‌ಗಳನ್ನು ಪ್ರದರ್ಶಿಸಿದ ವಿಪಕ್ಷ ಸಂಸದರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ವಿಪಕ್ಷಗಳ ವಿರೋಧವೇನು?: ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಲು ಪ್ರಸ್ತಾಪಿಸಿರುವ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ತಿದ್ದುಪಡಿ ಮಸೂದೆ ದೇಶದ ಅಲ್ಪಸಂಖ್ಯಾತರು ನಡೆಸುವ ಸಂಸ್ಥೆಗಳು ಮತ್ತು ಎನ್‌ಜಿಒಗಳ ಮೇಲೆ ಪರಿಣಾಮ ಬೀರುವ ಕಠಿಣ ಕಾನೂನು ಎಂದು ವಿಪಕ್ಷಗಳು ಆರೋಪಿಸುತ್ತಿವೆ.
ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಸಂಸದ ಹಿಬಿ ಈಡನ್, “ಇದು ಅಲ್ಪಸಂಖ್ಯಾತರು ಮಾತ್ರವಲ್ಲದೆ ಭಾರತದಲ್ಲಿ ನಡೆಯುತ್ತಿರುವ ಅನೇಕ ಎನ್‌ಜಿಒಗಳ ಹಿತಾಸಕ್ತಿಗಳಿಗೆ ಅಡ್ಡಿಯಾಗುವ ಕಠಿಣ ಕಾನೂನಾಗಲಿದೆ. ಇದರಿಂದಾಗಿ ಮಸೂದೆಯನ್ನು ಸರ್ಕಾರ ಹಿಂಪಡೆಯಬೇಕು” ಎಂದು ಹೇಳಿದರು.
ಇನ್ನೊಬ್ಬ ಸಂಸದ ಧರ್ಮವೀರ್ ಗಾಂಧಿ ಮಾತನಾಡಿ, “ನಾವು ಈ ಮಸೂದೆಯನ್ನು ವಿರೋಧಿಸುತ್ತೇವೆ. ಯಾವುದೇ ಮಸೂದೆಯು ಸಮಾಜದ ಎಲ್ಲಾ ವರ್ಗಗಳಿಗೆ ಪ್ರಯೋಜನವನ್ನು ನೀಡುವ ನಿಷ್ಪಕ್ಷಪಾತ ನಿರ್ಧಾರವಾಗಿರಬೇಕು. ಇದು ಹಾಗೆ ಕಾಣುತ್ತಿಲ್ಲ” ಎಂದರು.ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಾತನಾಡಿ, “ಪ್ರಸ್ತಾವಿತ ಮಸೂದೆಯು ಸುಳ್ಳುಗಳ ಕಂತೆಯಾಗಿದೆ. ಪಿಎಂ ಕೇರ್ಸ್ ನಿಧಿ, ಚುನಾವಣಾ ಬಾಂಡ್‌ಗಳು ಮತ್ತು ಎನ್‌ಜಿಒಗಳ ಮೂಲಕ ಬಿಜೆಪಿ ಸ್ವೀಕರಿಸಿದ ನಿಧಿಯ ಬಗ್ಗೆಯೂ ಬಹಿರಂಗವಾಗಬೇಕು” ಎಂದು ಒತ್ತಾಯಿಸಿದ್ದಾರೆ.
ಇದಕ್ಕೂ ಮೊದಲು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಅವರು, “ಪಿಎಂ ಕೇರ್ಸ್ ನಿಧಿಗೆ ವಿದೇಶದಿಂದ ಪಡೆದ ಹಣವನ್ನು ಹಿಂತಿರುಗಿಸಲಾಗುತ್ತದೆಯೇ? ಚುನಾವಣಾ ಬಾಂಡ್‌ಗಳ ಮೂಲಕ ಸ್ವೀಕರಿಸಿದ ಹಣವನ್ನು ಏಕೆ ಕಾನೂನುಬಾಹಿರವೆಂದು ಘೋಷಿಸಲು ಸಾಧ್ಯವೇ” ಎಂದು ಪ್ರಶ್ನಿಸಿದ್ದರು. ಕೇರಳಂ ಸಿಎಂ ಪಿಣರಾಯಿ ಆಕ್ಷೇಪ: ಕೇರಳಂ ಸಿಎಂ ಪಿಣರಾಯಿ ವಿಜಯನ್ ಅವರು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ವಿರೋಧಿಸಿದ್ದಾರೆ. “ಇದು ಸಾಮಾಜಿಕ ಸೇವಾ ಸಂಸ್ಥೆಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ” ಎಂದು ಹೇಳಿದ್ದಾರೆ. “ಸಂಸತ್ತಿನ ಮೂಲಕ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ ತರಾತುರಿಯಲ್ಲಿ ತಿದ್ದುಪಡಿಗಳನ್ನು ತರುವ ಕೇಂದ್ರ ಸರ್ಕಾರದ ಕ್ರಮವು ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತದೆ. ಇದು ಸಾಮಾಜಿಕ ಸೇವಾ ವಲಯದಲ್ಲಿ ಕಾರ್ಯನಿರ್ವಹಿಸುವ ಅನೇಕ ಸಂಸ್ಥೆಗಳ ಕಾರ್ಯವೈಖರಿ ಮತ್ತು ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ.
