ಉದಯವಾಹಿನಿ, ಟೆಹ್ರಾನ್‌: ಯುದ್ಧ ಶುರುವಾದಾಗಿನಿಂದ ಅಮೆರಿಕದೊಂದಿಗೆ ಯಾವುದೇ ರೀತಿಯ ಪ್ರತ್ಯಕ್ಷ, ಪರೋಕ್ಷ ಮಾತುಕತೆಗಳು ನಡೆದಿಲ್ಲ. ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಅಮೆರಿಕದ ಮನವಿಯನ್ನಷ್ಟೇ ಸ್ವೀಕರಿಸಿದ್ದೇವೆ ಎಂದು ಇರಾನ್‌ ಹೇಳಿದೆ. ಈ ಮೂಲಕ ʻಮಾತುಕತೆ ಚೆನ್ನಾಗಿ ನಡೆಯುತ್ತಿದೆ, ಅಮೆರಿಕದ 15 ಅಂಶಗಳ ಪ್ರಸ್ತಾವನೆಯನ್ನು ಇರಾನ್‌ ಒಪ್ಪಿಕೊಂಡಿದೆ’ ಎನ್ನುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೇಳಿಕೆಯನ್ನ ತಿರಸ್ಕರಿಸಿದೆ. ಇಂದು ಇರಾನ್‌ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಈ 31 ದಿನಗಳಲ್ಲಿ ಅಮೆರಿಕದೊಂದಿಗೆ ಯಾವುದೇ ಮಾತುಕತೆಗಳು ನಡೆದಿಲ್ಲ. ಅಮೆರಿಕವು ಪಾಕಿಸ್ತಾನ ಹೇಳಿದಂತೆ ಮಧ್ಯವರ್ತಿಗಳ ಮೂಲಕ ಪ್ರಸ್ತಾವನೆ ಸಲ್ಲಿಸುವ ಕೆಲಸವನ್ನಷ್ಟೇ ಮಾಡಿದೆ. ಅಮೆರಿಕದ ಮನವಿಯನ್ನು ಸ್ವೀಕರಿಸಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದೆ.
ನಮ್ಮ ನಿಲುವು ಸ್ಪಷ್ಟವಾಗಿದೆ. ಅಮೆರಿಕದ ಮಿಲಿಟರಿ ಆಕ್ರಮಣವು ಪೂರ್ಣ ಪ್ರಮಾಣದಲ್ಲಿ ಮುಂದುವರಿದಂತೆ ಇರಾನ್‌ ತನ್ನನ್ನು ತಾನು ರಕ್ಷಿಸಿಕೊಳ್ಳುವತ್ತ ಗಮನಹರಿಸಿದೆ. ಕಳೆದ ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ 2 ಸಂದರ್ಭಗಳಲ್ಲಿ ಅಮೆರಿಕ ಮಾಡಿದ ದ್ರೋಹವನ್ನು ನಾವು ಮರೆಯುವುದಿಲ್ಲ ಎಂದೂ ಇರಾನ್‌ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ ತಿಳಿಸಿದ್ದಾರೆ.
ಫೆಬ್ರವರಿ 28 ರಂದು ʻಆಪರೇಷನ್ ಎಪಿಕ್ ಫ್ಯೂರಿʼ ಕಾರ್ಯಾಚರಣೆ ಅಡಿಯಲ್ಲಿ ಶುರುವಾದ ಇರಾನ್-ಅಮೆರಿಕ-ಇಸ್ರೇಲ್ ಯುದ್ಧವು ಈಗ 2ನೇ ತಿಂಗಳಿಗೆ ಪ್ರವೇಶಿಸಿದೆ. ಆದಾಗ್ಯೂ ಉದ್ವಿಗ್ನತೆ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯೊಂದಿಗೆ ಪ್ರಾರಂಭವಾದ ಸಂಘರ್ಷವು ತೀವ್ರಗೊಳ್ಳುತ್ತಲೇ ಇದೆ.

Leave a Reply

Your email address will not be published. Required fields are marked *

error: Content is protected !!