ಉದಯವಾಹಿನಿ, ನ್ಯೂಯಾರ್ಕ್​ (ಅಮೆರಿಕ): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಇರಾನ್‌ನ ತೈಲ ಬಾವಿಗಳು, ನೀರು ಸಂಸ್ಕರಣ ಘಟಕ ಸೇರಿದಂತೆ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ತಮ್ಮ ಟ್ರುಥ್​ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಹಂಚಿಕೊಂಡಿರುವ ಟ್ರಂಪ್​, ಸಂಘರ್ಷವನ್ನು ಕೊನೆಗೊಳಿಸುವ ಒಪ್ಪಂದವನ್ನು ಇರಾನ್​ ಶೀಘ್ರವೇ ಮಾಡಿಕೊಳ್ಳದಿದ್ದರೆ, ಅದರ ತೈಲ, ಇಂಧನ, ನೀರಿನ ನೆಲೆಗಳನ್ನು ಧ್ವಂಸ ಮಾಡಲಾಗುವುದು. ಖಾರ್ಗ್​ ದ್ವೀಪವನ್ನೂ ವಶಕ್ಕೆ ಪಡೆಯಲಾಗುವುದು ಎಂದೂ ಬೆದರಿಕೆ ಹಾಕಿದ್ದಾರೆ.
ತೈಲ ಟ್ಯಾಂಕರ್​ಗಳು ಸೇರಿ ಇತರ ವಸ್ತುಗಳುಳ್ಳ ನೌಕೆಗಳ ಸಂಚಾರಕ್ಕೆ ಹಾರ್ಮುಜ್​ ಜಲಸಂಧಿಯನ್ನು ಇರಾನ್​ ಎಲ್ಲ ದೇಶಗಳಿಗೆ ಮುಕ್ತಗೊಳಿಸಬೇಕು. ಇಲ್ಲವಾದಲ್ಲಿ ಭೀಕರ ದಾಳಿಯನ್ನು ಎದುರಿಸಬೇಕಾಗುತ್ತದೆ. ಇರಾನ್‌ನಲ್ಲಿ ಸಹಜ ‘ವಾಸ್ತವ್ಯ’ವನ್ನೇ ಮುಕ್ತಾಯಗೊಳಿಸುತ್ತೇವೆ” ಎಂದು ಟ್ರಂಪ್ ಧಮ್ಕಿ ಹಾಕಿದ್ದಾರೆ.
ಪ್ರತೀಕಾರಕ್ಕೆ ಇರಾನ್​ ಮುಂದಾದರೆ?: ಟ್ರಂಪ್​​ರ ಈ ಬೆದರಿಕೆಗೆ ಬಗ್ಗದ ಇರಾನ್​ ದಾಳಿ ನಡೆಸಲು ಮುಂದಾದರೆ, ತಮ್ಮ ಪ್ರತೀಕಾರವೂ ಮುಂದುವರಿಯಲಿದೆ ಎಂದಿದೆ. ಹೀಗಾದಲ್ಲಿ, ಮಧ್ಯಪ್ರಾಚ್ಯದಲ್ಲಿ ತೈಲದ ಜೊತೆಗೆ ನೀರಿನ ಹಾಹಾಕಾರವೂ ಉಲ್ಬಣಿಸಲಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.
ಇರಾನ್ ತನ್ನ ಜನರಿಗೆ ನೀರಿನ ಪೂರೈಕೆಗಾಗಿ ಉಪ್ಪುನೀರಿನ ಸಂಸ್ಕರಣಾ ಘಟಕಗಳನ್ನು ಹೊಂದಿದೆ. ಗಲ್ಫ್ ಅರಬ್ ರಾಷ್ಟ್ರಗಳೂ ಇದೇ ರೀತಿಯ ಘಟಕಗಳನ್ನು ಹೊಂದಿವೆ. ಪರ್ಷಿಯನ್ ಕೊಲ್ಲಿ ಕರಾವಳಿಯಲ್ಲಿ ನೂರಾರು ಉಪ್ಪುನೀರಿನ ಸಂಸ್ಕರಣಾ ಘಟಕಗಳಿವೆ. ಲಕ್ಷಾಂತರ ಜನರಿಗೆ ನೀರು ಸರಬರಾಜು ಮಾಡುವ ಈ ವ್ಯವಸ್ಥೆಗಳ ಮೇಲೆ ಇರಾನಿನ ಕ್ಷಿಪಣಿ ಅಥವಾ ಡ್ರೋನ್ ದಾಳಿ ನಡೆದಲ್ಲಿ ಜನರ ಬದುಕು ದುಸ್ತರವಾಗಲಿದೆ ಎಂದು ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದಾರೆ.
ನೀರಿನ ಘಟಕಗಳ ಮೇಲೆ ದಾಳಿ ಅಪಾಯಕಾರಿ: “ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ ಮತ್ತು ಅಬುಧಾಬಿ, ಕತಾರ್‌ನ ರಾಜಧಾನಿ ದೋಹಾದಂತಹ ಪ್ರಮುಖ ನಗರಗಳು ಇರಾನ್​ ದಾಳಿಯಿಂದ ತತ್ತರಿಸುತ್ತಿವೆ. ಅಲ್ಲಿನ ಜನರನ್ನು ಉಳಿಸಿಕೊಳ್ಳಲು ಉಪ್ಪುನೀರಿನ ಸಂಸ್ಕರಣಾ ಘಟಕಗಳು ಅಗತ್ಯವಾಗಿವೆ. ಆ ರೀತಿಯ ಸೌಲಭ್ಯಗಳ ಉದ್ದೇಶಪೂರ್ವಕ ನಾಶವು ಯುದ್ಧ ಅಪರಾಧವಾಗಲಿದೆ” ಎಂದು ಹ್ಯೂಮನ್ ರೈಟ್ಸ್ ವಾಚ್‌ನ ಸಂಶೋಧಕ ನಿಕು ಜಾಫರ್ನಿಯಾ ಹೇಳುತ್ತಾರೆ. ತೀವ್ರ ಬರಗಾಲದ ನಂತರ, ಇರಾನ್​​ನ ಕೆಲ ಜಲಮೂಲಗಳಿಗೆ ಕಡಿಮೆಯಾದರೂ ನೀರು ಬಂದಿದೆ. ಈಗ ಅವುಗಳೂ ಖಾಲಿಯಾಗುವ ಹಂತಕ್ಕೆ ತಲುಪಿವೆ. ಇತ್ತ, ತೈಲ ಘಟಕಗಳ ಮೇಲೆ ಇಸ್ರೇಲ್​ ವೈಮಾನಿಕ ದಾಳಿಗಳು ಭಾರಿ ಹೊಗೆ ಮತ್ತು ಆಮ್ಲ ಮಳೆಯನ್ನು ಸುರಿಸಿವೆ. ಇದರಿಂದ ಮಣ್ಣು ಮತ್ತು ನಗರಗಳಿಗೆ ಸರಬರಾಜಾಗುವ ನೀರು ಕಲುಷಿತಗೊಳಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!