ಉದಯವಾಹಿನಿ, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಕಾಂಬಿನೇಷನ್‌ನ ‘ದೃಶ್ಯಂ’ ಸಿನಿಮಾ ಸರಣಿ ಇಡೀ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದೆ. ಇದೀಗ ಈ ಸರಣಿಯ ಕೊನೆಯ ಭಾಗ ಎನ್ನಲಾದ ‘ದೃಶ್ಯಂ 3’ ಬಿಡುಗಡೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ಡಿಜಿಟಲ್ ಹಕ್ಕುಗಳ ವಿಚಾರವಾಗಿ ಅಮೆಜಾನ್ ಪ್ರೈಂ ದೊಡ್ಡ ಸಂಚಲನ ಮೂಡಿಸಿದೆ.
ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಾರ್ವಜನಿಕ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಆಶೀರ್ವಾದ್ ಸಿನಿಮಾಸ್ ಜೊತೆಗಿನ ಒಪ್ಪಂದದ ಪ್ರಕಾರ ‘ದೃಶ್ಯಂ 3’ ಚಿತ್ರದ ಪೂರ್ಣ ಡಿಜಿಟಲ್ ಹಕ್ಕುಗಳು ತನಗೆ ಮಾತ್ರ ಸೇರಿವೆ ಎಂದು ಸ್ಪಷ್ಟಪಡಿಸಿದೆ. ಈ ಹಕ್ಕುಗಳನ್ನು ಬೇರೆ ಯಾವುದೇ ಸಂಸ್ಥೆ ಅಥವಾ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಮಾರಾಟ ಮಾಡಲು ನಿರ್ಮಾಪಕರಿಗೆ ಹಕ್ಕಿಲ್ಲ ಎಂದು ಅಮೆಜಾನ್ ಎಚ್ಚರಿಸಿದೆ. ಒಂದು ವೇಳೆ ಈ ನಿಯಮ ಮೀರಿ ಯಾರಾದರೂ ಹಕ್ಕುಗಳನ್ನು ಖರೀದಿಸಲು ಮುಂದಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಪಶ್ಚಿಮ ಏಷ್ಯಾದ ಯುದ್ಧದ ಪರಿಸ್ಥಿತಿಯಿಂದಾಗಿ ಈ ಮೊದಲು ಏಪ್ರಿಲ್ 2 ರಂದು ನಿಗದಿಯಾಗಿದ್ದ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ಇದೀಗ ಮೋಹನ್ ಲಾಲ್ ಅವರ ಜನ್ಮದಿನದ ವಿಶೇಷವಾಗಿ ಮೇ 21 ರಂದು ‘ದೃಶ್ಯಂ 3’ ಪ್ರಪಂಚದಾದ್ಯಂತ ತೆರೆಗೆ ಬರಲಿದೆ. ಮೀನಾ, ಅನ್ಸಿಬಾ ಹಸನ್ ಸೇರಿದಂತೆ ಹಳೆಯ ತಾರಾಗಣವೇ ಈ ಚಿತ್ರದಲ್ಲೂ ಮುಂದುವರಿಯಲಿದ್ದು, ಜಾರ್ಜ್ ಕುಟ್ಟಿಯ ರೋಚಕ ಕಥೆಗೆ ಇಲ್ಲಿ ಪೂರ್ಣವಿರಾಮ ಸಿಗಲಿದೆ ಎಂದು ಹೇಳಲಾಗುತ್ತಿದೆ.
