ಉದಯವಾಹಿನಿ, ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆದ್ರೆ ಗುಜರಾತ್ ಟೈಟಾನ್ಸ್ ವಿರುದ್ಧ ಮಾಡಿದ ತಪ್ಪನ್ನೇ ಮತ್ತೆ ಮಾಡಿದ ಕಾರಣ ತಂಡದ ನಾಯಕ ಶ್ರೇಯಸ್ ಅಯ್ಯರ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ತಪ್ಪು ಮತ್ತೆ ಮರುಕಳಿಸಿದ್ರೆ, ಅಯ್ಯರ್ 36 ಲಕ್ಷ ರೂ. ದಂಡದೊಂದಿಗೆ ಒಂದು ಪಂದ್ಯದಿಂದ ಬ್ಯಾನ್ ಆಗಲಿದ್ದಾರೆ.
ಹೌದು. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನೀತಿ ಸಂಹಿತೆ ಉಲ್ಲಂಘನೆ ಆಧಾರದ ಮೇಲೆ ಅಯ್ಯರ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಮತ್ತೊಂದು ಪಂದ್ಯದಲ್ಲಿ ಈ ರೀತಿ ಮಾಡಿದ್ರೆ, ಅದರ ಮುಂದಿನ ಒಂದು ಪಂದ್ಯದಿಂದ ಅಯ್ಯರ್ ಬ್ಯಾನ್ ಆಗಲಿದ್ದಾರೆ. 2024ರ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದ ರಿಷಭ್ ಪಂತ್ ಇದೇ ತಪ್ಪು ಮಾಡಿ ನಿರ್ಣಾಯಕ ಪಂದ್ಯದಿಂದ ಬ್ಯಾನ್ ಆಗಿದ್ದರು.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 7ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಧಾನಗತಿಯ ಓವರ್ ರೇಟ್ (slow over-rate) ಕಾಯ್ದುಕೊಂಡಿತು. ಇದ್ದಕ್ಕಾಗಿ ನಾಯಕನಿಗೆ 24 ಲಕ್ಷ ದಂಡ ವಿಧಿಸಲಾಗಿದೆ. ಇನ್ನೂ ಇಂಪ್ಯಾಕ್ಟ್ ಪ್ಲೇಯರ್ ಸೇರಿ ಪ್ಲೇಯಿಂಗ್-11 ನ ಇತರ ಸದಸ್ಯರಿಗೆ ತಲಾ 6 ಲಕ್ಷ ರೂ. ದಂಡ ಅಥವಾ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ. ಇದರಲ್ಲಿ ಯಾವುದು ಅನುಕೂಲವೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಐಪಿಎಲ್ ಮಂಡಳಿ ಹೇಳಿದೆ.
