
ಉದಯವಾಹಿನಿ, ಜಮ್ಮು: ಹಿಮಾಲಯದಲ್ಲಿ ಹಿಂದೂಗಳ ವಾರ್ಷಿಕ ಅಮರನಾಥ ಯಾತ್ರೆ 2026ರ ಯಾತ್ರೆ ಜುಲೈ 3ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 28ರವರೆಗೆ ಸಾಗಲಿದೆ. ಈ ಯಾತ್ರೆಗೆ ಯಾತ್ರಾರ್ಥಿಗಳಿಗೆ ನೋಂದಣಿ ಪ್ರಕ್ರಿಯೆ ಏಪ್ರಿಲ್ 15ರಿಂದ ಪ್ರಾರಂಭವಾಗಿದೆ.
ಈ ಯಾತ್ರೆಗೆ ನೋಂದಣಿ ಪ್ರಕ್ರಿಯೆಯೂ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಮಾಡಿಕೊಳ್ಳಬಹುದಾಗಿದೆ. ಯಾತ್ರಾರ್ಥಿಗಳು ಶ್ರೀ ಅಮರನಾಥ ಯಾತ್ರಾ ಮಂಡಳಿಯ ಅಧಿಕೃತ ವೆಬ್ಸೈಟ್ನಲ್ಲಿ ಮಾಡಿಕೊಳ್ಳಬಹುದಾಗಿದೆ. ಯಾತ್ರೆಯ ಶುಲ್ಕ ಪಾವತಿಗೆ ದೇಶಾದ್ಯಂತ 550 ಗುರುತಿಸಿ ಬ್ಯಾಂಕ್ಗಳಲ್ಲಿ ನಡೆಸಬಹುದಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೆಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.
ಯಾತ್ರೆಯನ್ನು ಸುರಕ್ಷಿತವಾಗಿ ಮತ್ತು ಕ್ರಮಬದ್ಧವಾಗಿ ಕೈಗೊಳ್ಳಲು ಯಾತ್ರಿಕರು ವೈದ್ಯಕೀಯ ಪರೀಕ್ಷೆಯನ್ನು ಪೂರ್ಣಗೊಳಿಸಿ ಕಡ್ಡಾಯ ವೈದ್ಯಕೀಯ ನಮೂನೆಗಳನ್ನು ಸಲ್ಲಿಸುವಂತೆ ಆಡಳಿತವು ಇದೇ ವೇಳೆ ನಿರ್ದೇಶಿಸಿದೆ. ಯಾತ್ರೆಗೆ ನೋಂದಾಯಿಸುವ ಮೊದಲು ಯಾತ್ರಿಕರು ಮತ್ತು ವೈದ್ಯರು ಭರ್ತಿ ಮಾಡಬೇಕಾದ ವಿವರವಾದ ವೈದ್ಯಕೀಯ ಮಾರ್ಗಸೂಚಿಗಳನ್ನೂ ಸಹ ಬಿಡುಗಡೆ ಮಾಡಲಾಗಿದೆ.
ಅಮರನಾಥ ಯಾತ್ರೆಯು ಭಾರತದ ಪ್ರಮುಖ ಧಾರ್ಮಿಕ ತೀರ್ಥಯಾತ್ರೆಗಳಲ್ಲಿ ಒಂದಾಗಿದೆ. ನೈಸರ್ಗಿಕವಾಗಿ ರೂಪುಗೊಂಡಿರುವ ಹಿಮ ಶಿವಲಿಂಗದ ದರ್ಶನಕ್ಕಾಗಿ ಭಕ್ತರು ಕಷ್ಟಕರವಾದ ಪರ್ವತ ಮಾರ್ಗಗಳ ಮೂಲಕ ಪ್ರಯಾಣಿಸುತ್ತಾರೆ.
