ಉದಯವಾಹಿನಿ, ಜಗದಲ್ಪುರ (ಛತ್ತೀಸ್​ಗಢ): ಇಲ್ಲಿನ ಬಸ್ತಾರ್​ನ ದಟ್ಟ ಅರಣ್ಯದಲ್ಲಿ ಅಪರೂಪದ ನಿಶಾಚರಿ ಲೆಪರ್ಡ್ ಗೆಕ್ಕೋ ಕಾಣಿಸಿಕೊಂಡಿದೆ. ಇದು ಸಂಶೋಧಕರನ್ನು ಅಚ್ಚರಿಗೊಳಿಸಿದೆ. ಇದು ಇಲ್ಲಿನ ಅರಣ್ಯದ ಜೀವ ವೈವಿಧ್ಯತೆಯ ಕುರಿತು ಮಾಹಿತಿ ನೀಡುವಂತಿದೆ. ರಾತ್ರಿ ಹೊತ್ತು ಕಾಣಿಸಿಕೊಳ್ಳುವ ಅಪರೂಪದ ಸರಿಸೃಪವಾದ ಪೇಂಟೆಡ್​ ಲೆಪರ್ಡ್​ ಗೆಕ್ಕೊ ಎಂದು ಕರೆಯುವ ವಿಶಿಷ್ಟ ಹಲ್ಲಿಯಾಗಿದೆ. ಇತ್ತೀಚೆಗೆ ಈ ಸರಿಸೃಪ ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯ ದಿಲ್ಮಿಲಿ ರೈಲ್ವೆ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ಗಮನ ಸೆಳೆದಿದೆ.

ಈ ಕುರಿತು ಮಾತನಾಡಿರುವ ವಿಭಾಗೀಯ ಅರಣ್ಯ ಅಧಿಕಾರಿ ಯೋಗೇಶ್ ಕುಮಾರ್, ಈ ಸರಿಸೃಪ ಕಳೆದ ವಾರ ಠಾಣೆ ಆವರಣದಲ್ಲಿ ಕಾಣಿಸಿಕೊಂಡಿದೆ. ಬಸ್ತಾರ್​ ಪ್ರದೇಶದಲ್ಲಿ ಕಂಡು ಬಂದಿರುವ ಇದು ಸಾಮಾನ್ಯವಾಗಿ ದೇಶದಲ್ಲಿ ಕಾಣಿಸುವ ವಿಶಿಷ್ಟ ಬಗೆಯ ಹಲ್ಲಿಗೆ ಹೋಲುತ್ತದೆ ಎಂದಿದ್ದಾರೆ. ತಜ್ಞರು, ಇದು ಬಣ್ಣದ ಲೆಪರ್ಡ್​ ಗೆಕ್ಕೊ ಅಂದರೆ ಚಿರತೆ ಬಣ್ಣವನ್ನು ಹೊಂದಿರುವ ಹಲ್ಲಿ ಆಗಿದ್ದು, ಇದು ಈ ಹಿಂದೆ ಆಂಧ್ರ ಪ್ರದೇಶದ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡಿತ್ತು ಎಂದಿದ್ದಾರೆ.

ಬಸ್ತಾರ್‌ನ ಅರಣ್ಯ ಪ್ರದೇಶವು ಅಂತಹ ಪ್ರಭೇದಗಳಿಗೆ ಸೂಕ್ತವಾದ ಆವಾಸಸ್ಥಾನವನ್ನು ಒದಗಿಸುತ್ತದೆ. ಆದರೂ ಅದರ ವರ್ಗೀಕರಣವನ್ನು ದೃಢೀಕರಿಸಲು ವಿವರವಾದ ವೈಜ್ಞಾನಿಕ ಪರಿಶೀಲನೆ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಈ ಸರೀಸೃಪವನ್ನು ಸುರಕ್ಷಿತವಾಗಿ ರಕ್ಷಿಸಿ, ನಂತರ ಅರಣ್ಯ ಇಲಾಖೆ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸೂಕ್ತವಾದ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡಲಾಗಿದೆ. ಇಂತಹ ಅಪರೂಪದ ಪ್ರಭೇದಗಳು ರಾತ್ರಿ ವೇಳೆ ಮಾತ್ರ ಸಂಚಾರ ಮಾಡುವ ನಿಶಾಚರಿ ಪ್ರಾಣಿಗಳಾಗಿವೆ. ಹಗಲಿನಲ್ಲಿ ಅಡಗಿಕೊಳ್ಳುವುದರಿಂದ ಇವು ಎಂದಿಗೂ ಮನುಷ್ಯರ ಮುಂದೆ ಕಾಣಿಸಿಕೊಳ್ಳುವುದಿಲ್ಲ ಎಂದು ಯೋಗೇಶ್​ ಕುಮಾರ್​ ಹೇಳಿದ್ದಾರೆ.

ಪೇಂಟೆಡ್ ಲೆಪರ್ಡ್ ಗೆಕ್ಕೊ ಹಲವಾರು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ. ಇವು ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಮಾತ್ರ ಬೇಟೆಯಾಡಲು ಹೊರಬರುತ್ತದೆ. ಇದು ನೆಲದ ಗ್ರಹಿಕೆ ಮೂಲಕ ಬೇಟೆಯನ್ನು ಪತ್ತೆ ಮಾಡುತ್ತದೆ. ಸಾಮಾನ್ಯವಾಗಿ ಕಂದು ಮತ್ತು ಹಳದಿ ಬಣ್ಣದಲ್ಲಿರುವ ಈ ಪ್ರಾಣಿಯ ಬಾಲ ಮೊದಲಿಗೆ ಎದ್ದು ಕಾಣುತ್ತದೆ. ದೇಹದ ಉಳಿದ ಭಾಗಗಳಿಗಿಂತ ಭಿನ್ನವಾಗಿ ಕಪ್ಪು ಮತ್ತು ಬಿಳಿ ಪಟ್ಟೆಗಳಿಂದ ಗುರುತಿಸಲ್ಪಟ್ಟಿದೆ. ಹಗಲು ಹೊತ್ತಿನಲ್ಲಿ, ಇದು ಬಿಲಗಳ ಒಳಗೆ, ಬಂಡೆಗಳ ಕೆಳಗೆ ಅಥವಾ ದಟ್ಟವಾದ ಪೊದೆಗಳ ಒಳಗೆ ಅಡಗಿರುತ್ತದೆ.

 

Leave a Reply

Your email address will not be published. Required fields are marked *

error: Content is protected !!