ಉದಯವಾಹಿನಿ, ಢಾಕಾ(ಬಾಂಗ್ಲಾದೇಶ): ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶದ ಪ್ರಜೆಗಳು ಸೇರಿದಂತೆ ಅಂದಾಜು 250 ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಮಂಗಳವಾರ ಅಂಡಮಾನ್ ಸಮುದ್ರದಲ್ಲಿ ಮುಳುಗಿದೆ. ಈ ದುರಂತದ ಸುದ್ದಿ ತಿಳಿದ ತಕ್ಷಣ ರಕ್ಷಣಾ ಸಿಬ್ಬಂದಿ ನಿರಂತರವಾಗಿ ಸಮರೋಪಾದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.ದಕ್ಷಿಣ ಬಾಂಗ್ಲಾದೇಶದ ಟೆಕ್ನಾಫ್‌ನಿಂದ ಹೊರಟ ಜನರಿಂದ ಕಿಕ್ಕಿರಿದು ತುಂಬಿದ್ದ ಈ ದೋಣಿ ಮಲೇಷ್ಯಾದತ್ತ ಹೋಗುತ್ತಿತ್ತು ಎಂದು ವರದಿಯಾಗಿದೆ. ಸಮುದ್ರದಲ್ಲಿ ಬಲವಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಘಟನೆ ಸಂಭವಿಸಿದೆ ಎಂಬ ಮಾಹಿತಿ ಇದೆ. ದೋಣಿ ಮುಳುಗಿ ಕಾಣೆಯಾದವರಲ್ಲಿ ಹಲವು ಕುಟುಂಬಗಳು, ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಮತ್ತು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ ದುರಂತದ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ತೀವ್ರ ಬೇಸರ ವ್ಯಕ್ತಪಡಿಸಿದೆ.
ರೋಹಿಂಗ್ಯಾಗಳಿಗೆ ಶಾಶ್ವತ ಪರಿಹಾರ ಸಿಗದೇ ಇರುವುದನ್ನು ಈ ದುರಂತ ಎತ್ತಿ ತೋರಿಸುತ್ತಿದೆ. ಮಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ರೋಹಿಂಗ್ಯಾಗಳಿಗೆ ಸುರಕ್ಷತೆಯ ಬದುಕಿನ ಭರವಸೆಯನ್ನು ಕ್ಷೀಣಿಸುತ್ತಿದೆ. ಅವರಿಗೆ ಮಾನವೀಯ ನೆರವು ಕುಗ್ಗುತ್ತಿದೆ. ನಿರಾಶ್ರಿತರ ಶಿಬಿರಗಳಲ್ಲಿನ ಬದುಕಿನ ಪರಿಸ್ಥಿತಿಗಳು ಸವಾಲಾಗುತ್ತಿವೆ. ಇಂಥ ಸಂದರ್ಭದಲ್ಲಿ ಶಿಕ್ಷಣ, ಜೀವನೋಪಾಯ ಮತ್ತು ಅವಕಾಶಗಳನ್ನು ಅರಸುತ್ತಾ ಅವರು ಅಪಾಯಕಾರಿ ಸಮುದ್ರ ಪ್ರಯಾಣ ಮಾಡುತ್ತಾರೆ ಎಂದು ತಿಳಿಸಿದೆ.
ಬಾಂಗ್ಲಾದಲ್ಲಿರುವ ರೋಹಿಂಗ್ಯಾ ನಿರಾಶ್ರಿತರಿಗೆ ಅಗತ್ಯ ನೆರವು ನೀಡಲು ನಾವು ಅಂತಾರಾಷ್ಟ್ರೀಯ ಸಮುದಾಯಗಳಿಗೆ ತುರ್ತು ಮನವಿ ಮಾಡುತ್ತೇವೆ. ಬಾಂಗ್ಲಾದೇಶ ತನ್ನ ಹೊಸ ವರ್ಷವನ್ನು ಆಚರಿಸುತ್ತಿರುವಾಗಲೇ ಈ ದುರಂತ ಘಟಿಸಿದೆ. ಮ್ಯಾನ್ಮಾರ್‌ನಲ್ಲಿ ಸ್ಥಳಾಂತರದ ಮೂಲ ಕಾರಣಗಳನ್ನು ಪರಿಹರಿಸಬೇಕು. ರೋಹಿಂಗ್ಯಾ ನಿರಾಶ್ರಿತರು ಸ್ವಯಂಪ್ರೇರಣೆಯಿಂದ, ಸುರಕ್ಷಿತ ಮತ್ತು ಘನತೆಯಿಂದ ಬದುಕು ಸಾಗಿಸಲು ಅನುವು ಮಾಡಿಕೊಡುವ ಪರಿಸ್ಥಿತಿಗಳನ್ನು ಸೃಷ್ಟಿಸಲು ತುರ್ತು ಕ್ರಮಗಳ ಅಗತ್ಯವಿದೆ ಎಂದು ಹೇಳಿದೆ. 2017ರಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದ ಹಿಂಸಾಚಾರದ ನಂತರ ಉಲ್ಬಣಿಸಿದ ರೋಹಿಂಗ್ಯಾ ಬಿಕ್ಕಟ್ಟು ದೊಡ್ಡ ಪ್ರಮಾಣದ ಸ್ಥಳಾಂತರಕ್ಕೆ ಕಾರಣವಾಗುತ್ತಿದೆ. ಇವರ ಪೈಕಿ ಲಕ್ಷಾಂತರ ಜನರು ಬಾಂಗ್ಲಾದಲ್ಲಿ ಆಶ್ರಯ ಪಡೆದಿದ್ದು, ಮಾನವ ಕಳ್ಳಸಾಗಣೆ ಜಾಲಗಳಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ನಿರಾಶ್ರಿತರ ಹೈ ಕಮಿಷನರ್ ತಿಳಿಸಿದೆ.ಇತ್ತೀಚಿನ ಬೋಟ್ ದುರಂತ: ಯಮುನಾ ನದಿಯಲ್ಲಿ ಕಳೆದ ಶುಕ್ರವಾರ ಮಧ್ಯಾಹ್ನ ಯಾತ್ರಿಕರ ದೋಣಿ ಮಗುಚಿ ಬಿದ್ದು ಹತ್ತು ಜನರು ಮೃತಪಟ್ಟು, ಹಲವರು ನಾಪತ್ತೆಯಾಗಿದ್ದರು. ಮಥುರಾದ ವೃಂದಾವನದಲ್ಲಿ ಘಟನೆ ಸಂಭವಿಸಿತ್ತು. ಮೃತರಲ್ಲಿ ಆರು ಮಹಿಳೆಯರು ಮತ್ತು ಮೂವರು ಪುರುಷರಿದ್ದರು.
