ಉದಯವಾಹಿನಿ, ಉತ್ತರ ಪ್ರದೇಶ: ಮದುವೆ ಮನೆಯಲ್ಲಿ ಬಾಲಕನೊಬ್ಬ ರಸಗುಲ್ಲಾ ತೆಗೆದುಕೊಂಡ ಎನ್ನುವ ಕಾರಣಕ್ಕೆ ಅಡುಗೆಯವನು ಆತನನ್ನು ತಂದೂರಿ ಬಟ್ಟಿಗೆ ಎಸೆದಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕನನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಘಟನೆಯ ಬಳಿಕ ಅಡುಗೆಯವನು ನಾಪತ್ತೆಯಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ಆತನಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಸಂಬಂಧಿಕರ ಮದುವೆಗಾಗಿ ಬುಧವಾರ ಹೋಗಿದ್ದ 11 ವರ್ಷದ ಬಾಲಕ ರಸಗುಲ್ಲಾ ತೆಗೆದ ಎನ್ನುವ ಕಾರಣಕ್ಕಾಗಿ ಆತನನ್ನು ಅಡುಗೆಯವನು ಸುಡುವ ತಂದೂರಿ ಬಟ್ಟಿಗೆ ಎಸೆದಿದ್ದಾನೆ. ತಕ್ಷಣವೇ ಆತನನ್ನು ಅಯೋಧ್ಯಾ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿದ್ದು, ಬಳಿಕ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಬಾಲಕನಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಈ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ಅಡುಗೆ ಕೆಲಸಗಾರನನ್ನು ಪತ್ತೆ ಹಚ್ಚಲು ಹುಡುಕಾಟ ತಕ್ಷಣ ಪ್ರಾರಂಭಿಸಿದ್ದಾರೆ.
ಗೊಂಡಾ ಜಿಲ್ಲೆಯ ನಿವಾಸಿ ಸಂತೋಷ್ ಅವರ ಮಗ ಚಮನ್ (11) ತಾಯಿ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಬಳಿಕ ಆತ ಬಸ್ತಿ ಜಿಲ್ಲೆಯಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದನು. ಅಲ್ಲಿಯೇ ಆತ ಎರಡನೇ ತರಗತಿ ಓದುತ್ತಿದ್ದನು. ಚಮನ್ ಬುಧವಾರ ತನ್ನ ಅಜ್ಜಿಯೊಂದಿಗೆ ಸಂಬಂಧಿಕರ ಮನೆಗೆ ಮದುವೆಗೆಂದು ಹೋಗಿದ್ದನು. ಈ ಸಂದರ್ಭದಲ್ಲಿ ಆತ ಆಹಾರ ತಯಾರಿಸುತ್ತಿದ್ದ ಸ್ಥಳಕ್ಕೆ ಹೋಗಿ ಅಲ್ಲಿ ಇರಿಸಲಾಗಿದ್ದ ರಸಗುಲ್ಲಾಗಳನ್ನು ತೆಗೆದು ತಿನ್ನಲು ಪ್ರಾರಂಭಿಸಿದ್ದಾನೆ. ಮಗು ಪದೇ ಪದೇ ರಸಗುಲ್ಲಾಗಳನ್ನು ಸೇವಿಸಿದಾಗ ಸ್ಥಳದಲ್ಲಿದ್ದ ಅಡುಗೆಯಾವನು ಸಿಟ್ಟುಗೊಂಡು ಮಗುವಿಗೆ ಬೆದರಿಸಿದ್ದಾನೆ. ಈ ವೇಳೆ ಮಗು ತಂದೂರಿ ಬಟ್ಟಿಗೆ ಬಿದ್ದಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಾಲಕನ ಅಳುವ ಶಬ್ದ ಕೇಳಿ ಜನರು ಸ್ಥಳಕ್ಕೆ ಧಾವಿಸಿ ಆತನನ್ನು ತಂದೂರಿ ಬಟ್ಟಿಯಿಂದ ಹೊರಗೆ ತೆಗೆದರು. ಬಾಲಕನಿಗೆ ಮುಖದಿಂದ ಸೊಂಟದವರೆಗೆ ಗಂಭೀರ ಸುಟ್ಟ ಗಾಯಗಳಾಗಿದ್ದವು. ಆತನನ್ನು ತಕ್ಷಣ ಲಕ್ನೋ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆ ಮುಂದುವರಿಸಲಾಗಿದೆ.ಘಟನೆಯ ಬಳಿಕ ಆರೋಪಿ ಅಡುಗೆಯವನು ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಪ್ರಾರಂಭಿಸಿದರು. ತಂದೂರಿ ಕೆಲಸಗಾರನ ವಿರುದ್ಧ ಮಗುವಿನ ಮಾವ ದೇವಿದಿನ್ ನಿಶಾದ್ ಪೊಲೀಸರಿಗೆ ದೂರು ನೀಡಿದರು.
