ಉದಯವಾಹಿನಿ, ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದಿಂದ ಪೂರೈಕೆಗೆ ಅಡಚಣೆ ಉಂಟಾಗಿ ದೇಶದಲ್ಲಿ ಮಾರ್ಚ್‌ನಲ್ಲಿ ಎಲ್‌ಪಿಜಿ ಬಳಕೆಯ ಪ್ರಮಾಣ ಶೇ.13ರಷ್ಟು ಕುಸಿದಿದೆ. ಈ ವಿಚಾರವನ್ನು ಕೇಂದ್ರದ ಅಧಿಕೃತ ಅಂಕಿಅಂಶಗಳು ತಿಳಿಸಿವೆ. ಮಾರ್ಚ್‌ನಲ್ಲಿ ಎಲ್‌ಪಿಜಿ ಬಳಕೆ 2.379 ಮಿಲಿಯನ್ ಟನ್‌ಗಳಷ್ಟಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಬಳಸಲಾದ 2.729 ಮಿಲಿಯನ್ ಟನ್‌ಗಳಿಗಿಂತ ಶೇ.12.8ರಷ್ಟು ಕಡಿಮೆಯಾಗಿದೆ.ಭಾರತ ತನ್ನ ಎಲ್‌ಪಿಜಿ ಅವಶ್ಯಕತೆಗಳಲ್ಲಿ ಸುಮಾರು ಶೇ.60ರಷ್ಟನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಹೆಚ್ಚಿನವು ಹಾರ್ಮುಜ್ ಜಲಸಂಧಿಯ ಮೂಲಕವೇ ದೇಶಕ್ಕೆ ಬರುತ್ತದೆ.
ಆದರೆ, ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿರುವುದು ಮತ್ತು ಇರಾನ್‌ನ ಪ್ರತೀಕಾರದ ಕ್ರಮಗಳ ನಂತರ ಜಲಸಂಧಿ ಸಂಪೂರ್ಣ ಬಂದ್ ಆಗಿತ್ತು. ಇದರಿಂದಾಗಿ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಅನಿಲ ಪೂರೈಕೆಗೆ ಅಡ್ಡಿಯಾಗಿತ್ತು. ಗೃಹ ಅಡುಗೆ ಅನಿಲ ಲಭ್ಯತೆಯನ್ನು ಕಾಪಾಡಿಕೊಳ್ಳಲು ಕೇಂದ್ರ ಸರ್ಕಾರ ಹೋಟೆಲ್‌ಗಳು ಮತ್ತು ಕೈಗಾರಿಕೆಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಎಲ್‌ಪಿಜಿ ಸರಬರಾಜನ್ನು ಕಡಿತ ಮಾಡಿತ್ತು.
ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ (PPAC)ದ ಪ್ರಕಾರ, ಮಾರ್ಚ್‌ನಲ್ಲಿ ಗೃಹಬಳಕೆಗೆ ಮಾರಾಟವಾದ ಎಲ್‌ಪಿಜಿ ಸಿಲಿಂಡರ್‌ಗಳು ಶೇ.8.1ರಷ್ಟು ಕುಸಿದು 2.219 ಮಿಲಿಯನ್ ಟನ್‌ಗಳಿಗೆ ತಲುಪಿದ್ದರೆ, ಗೃಹ ಬಳಕೆಯೇತರ ಬಳಕೆದಾರರಿಗೆ ಮಾರಾಟವಾದ ಸಿಲಿಂಡರ್‌ಗಳು ಸುಮಾರು ಶೇ.48ದಷ್ಟು ಕುಸಿದಿವೆ. ಬೃಹತ್ ಎಲ್‌ಪಿಜಿ ಮಾರಾಟ ಶೇ 75.5ರಷ್ಟು ಕುಸಿತ ಕಂಡಿದೆ.
ಎಲ್‌ಪಿಜಿ ಸರಬರಾಜುಗಳು ಸಾಮಾನ್ಯವಾಗಿದೆ. ದೇಶೀಯ ಬಳಕೆದಾರರಿಂದ ಎಲ್ಲಾ ಬೇಡಿಕೆಯನ್ನು ಪೂರೈಸಲಾಗುತ್ತಿದೆ ಎಂಬ ಕೇಂದ್ರ ಸರ್ಕಾರದ ಹೇಳಿಕೆಗಳಿಗೆ ಹೋಲಿಸಿದರೆ PPAC ದತ್ತಾಂಶ ಕಡಿಮೆ ಬಳಕೆಯನ್ನು ತೋರಿಸಿದೆ.ಕೊರತೆ ಸರಿದೂಗಿಸಲು ಎಲ್‌ಪಿಜಿ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ಪೆಟ್ರೋಕೆಮಿಕಲ್ ಉತ್ಪಾದನೆಯಿಂದ ಫೀಡ್‌ಸ್ಟಾಕ್ ಅನ್ನು ಬೇರೆಡೆಗೆ ತಿರುಗಿಸಲು ಸಂಸ್ಕರಣಾಗಾರಗಳಿಗೆ ನಿರ್ದೇಶನ ನೀಡಿತ್ತು. ಇದು PPACಯ ದತ್ತಾಂಶದ ಪ್ರಕಾರ, ದೇಶೀಯ ಅನಿಲ ಉತ್ಪಾದನೆ ಮಾರ್ಚ್‌ನಲ್ಲಿ 1.4 ಮಿಲಿಯನ್ ಟನ್‌ಗೇರಲು ಕಾರಣವಾಗಿದೆ. ಇದು ಒಂದು ವರ್ಷದ ಹಿಂದೆ 1.1 ಮಿಲಿಯನ್ ಟನ್ ಆಗಿತ್ತು ಎಂದು ದತ್ತಾಂಶ ತಿಳಿಸುತ್ತದೆ.
ಈ ಉತ್ತೇಜನಾತ್ಮಕ ಕ್ರಮ 2025-26ರ ಪೂರ್ಣ ಹಣಕಾಸು ವರ್ಷದಲ್ಲಿ (ಅಂದರೆ, 2025ರ ಏಪ್ರಿಲ್‌ನಿಂದ 2026ರ ಮಾರ್ಚ್‌ವರೆಗೆ) ಎಲ್‌ಪಿಜಿ ಉತ್ಪಾದನೆ ಹಿಂದಿನ ಎರಡು ಹಣಕಾಸು ವರ್ಷಗಳಲ್ಲಿ 12.8 ಮಿಲಿಯನ್ ಟನ್ ಉತ್ಪಾದನೆಯಿಂದ 13.1 ಮಿಲಿಯನ್ ಟನ್‌ಗೇರಲು ಕಾರಣವಾಗಿದೆ.
