ಉದಯವಾಹಿನಿ, ಪುಣೆ(ಮಹಾರಾಷ್ಟ್ರ): ಅಕ್ಷಯ ತೃತೀಯ ಹಿನ್ನೆಲೆ ಪುಣೆಯ ದಗ್ದುಶೇಠ ಗಣಪತಿಗೆ 11 ಸಾವಿರ ಮಾವಿನ ಹಣ್ಣುಗಳ ನೈವೇದ್ಯವನ್ನು (ಮಹಾಭೋಗ್) ಅರ್ಪಿಸಲಾಗಿದೆ. ಈ ನೈವೇದ್ಯವನ್ನು ಪ್ರತಿ ವರ್ಷ ಹಿಂದೂ ಕ್ಯಾಲೆಂಡರ್‌ನಲ್ಲಿ ಅತ್ಯಂತ ಶುಭ ದಿನಗಳಲ್ಲಿ ಒಂದಾದ ಅಕ್ಷಯ ತೃತೀಯದ ಶುಭ ದಿನದಂದು ಗಣೇಶನಿಗೆ ಅರ್ಪಿಸಲಾಗುತ್ತದೆ. ಈ ವಿಶೇಷ ದಿನದಂದು ಭಕ್ತರು ಬೆಳಗಿನ ಜಾವದಿಂದಲೇ ದೇವಾಲಯದಲ್ಲಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಾರೆ.
ಶ್ರೀಮಂತ್ ದಗ್ದುಶೇಠ್ ಹಲ್ವಾಯಿ ಸಾರ್ವಜನಿಕ ಗಣಪತಿ ಟ್ರಸ್ಟ್ ಮತ್ತು ಸುವರ್ಣಯುಗ್ ತರುಣ ಮಂಡಳದಿಂದ ದೇವಾಲಯದಲ್ಲಿ ಮಾವಿನ ನೈವೇದ್ಯವನ್ನು, ಪುಣೆಯ ಪ್ರಸಿದ್ಧ ಮಾವಿನ ವ್ಯಾಪಾರಿ ‘ದೇಸಾಯಿ ಅಂಬೇವಾಲೆ’ಯ ನಿರ್ದೇಶಕ ಮಂದರ್ ದೇಸಾಯಿ ಮತ್ತು ಅವರ ಕುಟುಂಬದ ಪರವಾಗಿ ಅರ್ಪಿಸಲಾಯಿತು.
ಭಾನುವಾರ ನಸುಕಿನಜಾವ 3 ಗಂಟೆಗೆ ದೇವಾಲಯದಲ್ಲಿ ಬ್ರಹ್ಮಣಸ್ಪತಿ ಸೂಕ್ತ ಅಭಿಷೇಕ ನಡೆಯಿತು. ನಂತರ, ನಸುಕಿನಜಾವ 4 ಗಂಟೆಗೆ, ಪ್ರಸಿದ್ಧ ಗಾಯಕಿ ವಿದುಷಿ ಮಂಜುಷಾ ಪಾಟೀಲ್ ಅವರು ಸ್ವರಾಭಿಷೇಕದ ಮೂಲಕ ತಮ್ಮ ಸಂಗೀತ ಸೇವೆಯನ್ನು ಸಲ್ಲಿಸಿದರು. ಬೆಳಗ್ಗೆ 8 ಗಂಟೆಗೆ ಗಣೇಶಯಾಗ ನಡೆಸಲಾಯಿತು. ಮಾವಿನ ಪ್ರಸಾದವನ್ನು ಸಸೂನ್ ಆಸ್ಪತ್ರೆಯ ರೋಗಿಗಳು, ಶ್ರೀವತ್ಸದ ಮಕ್ಕಳು, ಹಾಗೆಯೇ ವೃದ್ಧಾಶ್ರಮಗಳಲ್ಲಿನ ವೃದ್ಧರು, ವಿಕಲಚೇತನ ಮಕ್ಕಳ ಸಂಸ್ಥೆಗಳು ಮತ್ತು ದೇವಾಲಯದಲ್ಲಿ ಭಕ್ತರಿಗೆ ವಿತರಿಸಲು ನಿರ್ಧರಿಸಲಾಗಿದೆ. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಮಾವು ಪೂರೈಕೆ: ಅಕ್ಷಯ ತೃತೀಯ ಸಮಯದಲ್ಲಿ ಮಾವು ವಿಶೇಷ ಮಹತ್ವವನ್ನು ಹೊಂದಿವೆ. ಆದಾಗ್ಯೂ, ಈ ವರ್ಷ ಮಾರುಕಟ್ಟೆಗೆ ಮಾವು ಪೂರೈಕೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಬೆಲೆ ಏರಿಕೆಯ ಹೊರತಾಗಿಯೂ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾವಿನ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ಪುಣೆಯ ಮಾರುಕಟ್ಟೆ ಆವರಣದಲ್ಲಿ ಆಯೋಜಿಸಲಾಗಿರುವ ಮಾವಿನ ಹಣ್ಣುಗಳ ಉತ್ಸವದಲ್ಲಿ ಒಟ್ಟು 60 ಮಳಿಗೆಗಳನ್ನು ಸ್ಥಾಪಿಸಲಾಗಿದೆ.
ಈ ಉತ್ಸವದಲ್ಲಿ ಕೊಂಕಣ ಪ್ರದೇಶದ ಜಿಐ ಟ್ಯಾಗ್ ಹೊಂದಿರುವ ‘ಹಾಪಸ್’ (ಅಲ್ಫೋನ್ಸೊ) ಮಾವಿನ ಹಣ್ಣುಗಳು ಹಾಗೂ ಕೇಸರ್, ಪೈರಿ ಮತ್ತು ರಾಜ್ಯಾದ್ಯಂತದ ವಿವಿಧ ಪ್ರಭೇದಗಳ ಮಾವಿನ ಹಣ್ಣು ಮಾರಾಟವಾಗುತ್ತಿವೆ. ಗ್ರಾಹಕರು ರೈತರಿಂದ ನೇರವಾಗಿ ಮಾವಿನ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ಈ ವರ್ಷದ ಮಾವಿನ ಹಣ್ಣುಗಳ ಉತ್ಸವವು ಮೇ 31 ರವರೆಗೆ ನಡೆಯಲಿದೆ.
