ಉದಯವಾಹಿನಿ, ಡೆಹ್ರಾಡೂನ್ (ಉತ್ತರಾಖಂಡ) : ಈ ವರ್ಷ ನಾಲ್ಕು ದೇವಾಲಯಗಳಲ್ಲಿ ಮೂರಕ್ಕೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಿರುವುದರ ಹೊರತಾಗಿಯೂ ವಾರ್ಷಿಕ ಚಾರ್ ಧಾಮ್ ಯಾತ್ರೆ ಇಂದಿನಿಂದ ಪ್ರಾರಂಭವಾಗಲಿದೆ.
ಅಕ್ಷಯ ತೃತೀಯ ಸಂದರ್ಭದಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳ ಬಾಗಿಲುಗಳು ಇಂದು(ಭಾನುವಾರ) ತೆರೆಯಲಿದ್ದು, ರುದ್ರಪ್ರಯಾಗದ ಕೇದಾರನಾಥ ಮತ್ತು ಚಮೋಲಿಯ ಬದರಿನಾಥ ದೇವಾಲಯಗಳು ಕ್ರಮವಾಗಿ ಎಪ್ರಿಲ್ 22 ಮತ್ತು 23 ರಂದು ತೆರೆಯಲಿವೆ.ಸನಾತನೇತರರ ಮೇಲಿನ ನಿರ್ಬಂಧಗಳೊಂದಿಗೆ ಯಾತ್ರೆ ನಡೆಸುತ್ತಿರುವುದು ಇದೇ ಮೊದಲು. ಅದಾಗ್ಯೂ, ನಾವು ವಿಧಿಸಿರುವ ಕೆಲವು ಷರತ್ತುಗಳನ್ನು ಪೂರೈಸಿದರೆ ಅವರನ್ನು ದೇವಾಲಯದ ಪ್ರವೇಶಕ್ಕೆ ಅನುಮತಿಸುವುದಾಗಿ ದೇವಸ್ಥಾನದ ಸಮಿತಿ ತಿಳಿಸಿದೆ.ಬದರಿನಾಥ ಕೇದಾರನಾಥ ದೇವಾಲಯ ಸಮಿತಿಯು ಮಾರ್ಚ್ 10 ರಂದು ಈ ವಿಷಯದಲ್ಲಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತ್ತು.
ಸನಾತನ ಧರ್ಮದಲ್ಲಿ ತಮ್ಮ ನಂಬಿಕೆಯನ್ನು ಘೋಷಿಸುವ ಅಫಿಡವಿಟ್ ಸಲ್ಲಿಸಿದರೆ ಹಿಂದೂಯೇತರರು ದೇವಾಲಯಗಳಿಗೆ ಭೇಟಿ ನೀಡಬಹುದು ಎಂದು ಸಮಿತಿಯ ಅಧ್ಯಕ್ಷ ಹೇಮಂತ್ ದ್ವಿವೇದಿ ಸ್ಪಷ್ಟಪಡಿಸಿದ್ದಾರೆ.
ಅದೇ ರೀತಿ, ಗಂಗೋತ್ರಿ ದೇವಾಲಯ ಸಮಿತಿಯು ಪಂಚಗವ್ಯ (ಹಸುವಿನ ಸಗಣಿ, ಮೂತ್ರ, ಹಾಲು, ಮೊಸರು ಮತ್ತು ತುಪ್ಪದ ಮಿಶ್ರಣ) ಸೇವಿಸಿದ ನಂತರವೇ ಹಿಂದೂಯೇತರರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಘೋಷಿಸಿದೆ.
ಅದಾಗ್ಯೂ, ಯಮುನೋತ್ರಿ ದೇವಾಲಯ ಸಮಿತಿಯು ‘ಅತಿಥಿ ದೇವೋ ಭವ’ ಸಂಪ್ರದಾಯವನ್ನು ಪಾಲಿಸುತ್ತಾ, ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಎಲ್ಲಾ ಭಕ್ತರನ್ನು ಸ್ವಾಗತಿಸುವುದಾಗಿ ನಿರ್ಧರಿಸಿದೆ.
ದೇವಾಲಯ ಸಂಕೀರ್ಣಗಳ ಒಳಗೆ ಮೊಬೈಲ್ ಫೋನ್ ಮತ್ತು ಕ್ಯಾಮೆರಾಗಳ ಬಳಕೆಯನ್ನು ಆಡಳಿತವು ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ. ಬದರಿನಾಥ ಮತ್ತು ಕೇದಾರನಾಥದಲ್ಲಿ ಸಂಪೂರ್ಣ ನಿಷೇಧವಿದ್ದು, ಹೊರಗೆ ಶೇಖರಣಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳ 100 ಮೀಟರ್ ಸುತ್ತಲೂ ಗ್ಯಾಜೆಟ್ ರಹಿತ ವಲಯವನ್ನಾಗಿ ಮಾರ್ಪಡಿಸಲಾಗಿದೆ.

ಹಿಂದಿನ ವರ್ಷಗಳಲ್ಲಿ ದೇವಸ್ಥಾನದಲ್ಲಿನ ಭಕ್ತರ ದರ್ಶನ ನಿರ್ವಹಣೆಯಲ್ಲಿ ಕಂಡುಬಂದ ಅಡಚಣೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಂಗಾ ದೇವಿಗೆ ಅರ್ಪಿತವಾದ ಗಂಗೋತ್ರಿ ಧಾಮದ ಬಾಗಿಲುಗಳು ಮಧ್ಯಾಹ್ನ 12.15ಕ್ಕೆ ತೆರೆಯಲಿವೆ. ದೇವರ ವಿಗ್ರಹವು ಶನಿವಾರ ಮುಖ್ಬಾದಲ್ಲಿರುವ ಚಳಿಗಾಲದ ನಿವಾಸದಿಂದ ನಿರ್ಗಮಿಸಿದೆ. ಯಮುನಾ ದೇವಿಯ ವಿಗ್ರಹವು ಭಾನುವಾರ ಬೆಳಿಗ್ಗೆ ಖರ್ಸಾಲಿ ಗ್ರಾಮದಿಂದ ಹೊರಡಲಿದ್ದು, ಮಧ್ಯಾಹ್ನ 12.35ಕ್ಕೆ ಭಕ್ತರಿಗೆ ದೇವಾಲಯ ತೆರೆಯಲಿದೆ. ಏತನ್ಮಧ್ಯೆ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶನಿವಾರ ಋಷಿಕೇಶದಿಂದ ಬಸ್‌ಗಳಲ್ಲಿ ಹೊರಟ ಯಾತ್ರಾರ್ಥಿಗಳ ಮೊದಲ ಬ್ಯಾಚ್‌ಗೆ ಹಸಿರು ನಿಶಾನೆ ತೋರಿದ್ದಾರೆ. ಅಲ್ಲದೇ, ದೇಶಾದ್ಯಂತ ಆಗಮಿಸುವ ಭಕ್ತರಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಯಾತ್ರಿಕರನ್ನುದ್ದೇಶಿಸಿ ಮಾತನಾಡಿದ ಧಾಮಿ ಅವರು, ‘ಯಾತ್ರೆಯನ್ನು ಸುಗಮ, ಸುರಕ್ಷಿತ ಮತ್ತು ದೈವಿಕವಾಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಪ್ರತಿಯೊಬ್ಬ ಭಕ್ತರಿಗೂ ಭದ್ರತೆ, ಗೌರವ ಮತ್ತು ಆಧ್ಯಾತ್ಮಿಕ ಅನುಭವವನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಈ ವರ್ಷದ ಯಾತ್ರೆ ಹಿಂದಿನ ದಾಖಲೆಗಳನ್ನು ಮುರಿಯುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಕಳೆದ ವರ್ಷ ಪ್ರಕೃತಿ ವಿಕೋಪಗಳ ಹೊರತಾಗಿಯೂ 51 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ ಋತುವಿನಲ್ಲಿ ಸುಮಾರು 19 ಲಕ್ಷ ಭಕ್ತರು ಈಗಾಗಲೇ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ನೋಂದಾಯಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!