ಉದಯವಾಹಿನಿ, ಭುವನೇಶ್ವರ್ (ಒಡಿಶಾ): ಮದುವೆ ಸಂದರ್ಭ ಅಂದ್ರೆ ಅಲ್ಲಿ ಅದ್ಧೂರಿತನ ಇದ್ದೇ ಇರುತ್ತೆ. ಬಹುತೇಕರು ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದ್ರೆ ಇದಕ್ಕೆ ಅಪವಾದ ಎಂಬಂತೆ ಸರಳ ಮತ್ತು ಸಾಮಾಜಿಕ ಕಳಕಳಿ ಹೊಂದಿರುವ ಮದುವೆಯೊಂದಿಗೆ ಎರಡು ರಾಜ್ಯಗಳ ಜೋಡಿಯೊಂದು ಮಾದರಿಯಾಗಿದೆ.
ಹೌದು, ಒಡಿಶಾದ ವಧು ಮತ್ತು ಕರ್ನಾಟಕದ ವರನ ಕುಟುಂಬದವರು ತಮ್ಮ ಮಕ್ಕಳ ಮದುವೆಯ ಮೂರು ದಿನಗಳ ಸಮಾರಂಭವನ್ನು ಪರಿಸರ ಕಾಳಜಿ, ತಲೆಸ್ಸೆಮಿಯಾ ರೋಗಿಗಳ ಬಗೆಗಿನ ಅಂತಃಕರಣ ಮತ್ತು ಅನಾಥರಿಗೆ ನೆರವು ನೀಡುವ ಬಗ್ಗೆ ಅಚ್ಚುಕಟ್ಟಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ. ಒಡಿಶಾದ ಕೃಷಿ ಅಧಿಕಾರಿ ಶುಭಶ್ರೀ ಶುಭಸ್ಮಿತಾ ಅವರು ಕರ್ನಾಟಕದ ಪ್ರದೀಪ್ ಕುಮಾರ್ ಎನ್. ಅವರನ್ನು ವರಿಸಿದ್ದು, ಉಭಯ ಕುಟುಂಬಗಳು ಇದಕ್ಕೆ ‘ದಿವ್ಯ ವಿವಾಹ’ ಎಂದು ಹೆಸರಿಟ್ಟಿವೆ. ಕಾರಣ ಇದು ಸೇವೆ ಮತ್ತು ಸರಳತೆಯನ್ನು ಆಧರಿಸಿದ ಕಲ್ಯಾಣವಾಗಿದೆ. ಯಾವುದೇ ಬ್ಯಾಂಡ್ ಬಾಜಾ ಅಥವಾ ಸದ್ದು ಗದ್ದಲವಿಲ್ಲದೆ, ದುಂದುವೆಚ್ಚ ಇಲ್ಲದೆ ಮದುವೆ ನೆರವೇರಿದೆ. ಈ ವಿವಾಹ ಕಾರ್ಯಕ್ರಮ ಪ್ರದರ್ಶನಕ್ಕಾಗಿ ಅಲ್ಲದೆ, ಯುವ ಪೀಳಿಗೆಗೆ ಸ್ಫೂರ್ತಿ ನೀಡುವುದಾಗಿದೆ.
ಮೂರು ದಿನಗಳ ಕಾಲ ಯೋಜಿಸಿರುವ ಈ ವಿವಾಹವನ್ನು ಸಾಮಾಜಿಕ ಕಾಳಜಿಯ ದೃಷ್ಟಿಯಿಂದ ರೂಪಿಸಲಾಗಿದೆ. ಈ ಬಗ್ಗೆ ಮಾತನಾಡಿದ ವಧುವಿನ ತಂದೆ ಮತ್ತು ಸಮಾಜ ಸೇವಕರಾದ ಬೇನುಧರ್ ಸೇನಾಪತಿ, “ನಾವು ಮಕ್ಕಳಲ್ಲಿ, ವಿಶೇಷವಾಗಿ ನಿರ್ಗತಿಕರು ಮತ್ತು ಹಿಂದುಳಿದವರಿಗೆ ಸಹಾಯ ಮಾಡುವ ಮೂಲಕ ಸರಳ ರೀತಿಯಲ್ಲಿ ಮದುವೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದೆವು. ಮೊದಲ ದಿನ, ಥಲಸ್ಸೆಮಿಯಾ ರೋಗಿಗಳಿಗೆ ಪ್ರಯೋಜನವಾಗುವ ಉದ್ದೇಶದಿಂದ ರಕ್ತದಾನ ಶಿಬಿರವನ್ನು ನಡೆಸಿದೆವು. ಎರಡನೇ ದಿನ, ಶನಿವಾರ (ಎಪ್ರಿಲ್ 18), ನಾವು ಅನಾಥರಿಗಾಗಿ ‘ವಸ್ತ್ರ ಸೇವೆ’ಯನ್ನು ಆಯೋಜಿಸಿದ್ದೆವು. ಇಂದು (ಎಪ್ರಿಲ್ 19) ‘ಸಬುಜಾ ಸೈಸಾಹಬ್’, ಆಯೋಜಿಸಿದ್ದು ಇದು ಮಕ್ಕಳನ್ನು ಹಸಿರು ಪರಿಸರದೊಂದಿಗೆ ಬೆರೆಯಲು ಉತ್ತೇಜಿಸುತ್ತದೆ, ”ಎಂದು ಅವರು ತಿಳಿಸಿದರು.
