ಉದಯವಾಹಿನಿ, ಇತ್ತೀಚೆಗಷ್ಟೆ ನಟ ಪ್ರಕಾಶ್ ರಾಜ್ ಅವರು ರಾಮಾಯಣದ ಬಗ್ಗೆ ಮಾತನಾಡಿದ ವಿಡಿಯೋ ಒಂದು ವೈರಲ್ ಆಗಿತ್ತು. ವಿಡಿಯೋನಲ್ಲಿ ನಟ ಪ್ರಕಾಶ್ ರಾಜ್ ಅವರು ರಾಮನಿಗೆ, ರಾಮಾಯಣಕ್ಕೆ ಅವಮಾನ ಆಗುವಂತೆ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ ಎಂದು ಹಲವರು ಆರೋಪಿಸಿದ್ದರು. ಪ್ರಕಾಶ್ ರಾಜ್ ವಿರುದ್ಧ ಕ್ರಮಕ್ಕೆ ಸಹ ಒತ್ತಾಯಿಸಲಾಗಿತ್ತು. ಇದೀಗ ನಟ ಪ್ರಕಾಶ್ ರಾಜ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟ್ಟರ್​​ನಲ್ಲಿ ವಿಡಿಯೋ ಅಪ್​​ಲೋಡ್ ಮಾಡಿರುವ ಪ್ರಕಾಶ್ ರಾಜ್ ಉತ್ತರ ನೀಡಿದ್ದಾರೆ.

‘ಒಂದು ಸಾಹಿತ್ಯೋತ್ಸವದಲ್ಲಿ ‘ಕಲೆ ಮತ್ತು ಅದರ ಸ್ಥಿರತೆ’ ಎಂಬ ಗೋಷ್ಠಿಯಲ್ಲಿ ನಾನು ಸಂವಾದದಲ್ಲಿ ಭಾಗವಹಿಸಿದ್ದೆ. ಅದರಿಂದ ಕೆಲವು ಮಾತುಗಳನ್ನಷ್ಟೆ ತೆಗೆದುಕೊಂಡು ಅದನ್ನು ತಿರುಚಿ ನಾನು ಅವತಾರ ಪುರುಷ ಶ್ರೀರಾಮನ ವ್ಯಂಗ್ಯ ಮಾಡಿದ್ದೇನೆ. ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ ತಂದಿದ್ದೇನೆ ಎನ್ನುತ್ತಿದ್ದಾರೆ. ಎಲ್ಲ ಧರ್ಮಗಳನ್ನೂ ಪ್ರೀತಿಸುವ ನನಗೆ ಯಾರನ್ನು ನೋವಿಸುವ ಅವಶ್ಯಕತೆ ಇಲ್ಲ’ ಎಂದಿದ್ದಾರೆ ಪ್ರಕಾಶ್ ರಾಜ್.‘ಆದರೆ, ಧರ್ಮವನ್ನು ಮತೋನ್ಮಾಧದೊಂದಿಗೆ ಇರಿಸಿಕೊಂಡು ಅಸಹ್ಯರೀತಿಯ ರಾಜಕೀಯ ಮಾಡುತ್ತಾ ಇರುವವರು ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ, ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಈ ರೀತಿ ಎಲ್ಲ ಮಾಡುತ್ತಿದ್ದಾರೆ. ಪಾಪ ಅವರ ಕಷ್ಟ, ಅವರ ನೋವು ನನಗೆ ಅರ್ಥವಾಗುತ್ತದೆ. ಅವರಿಗೆ ನಾನು ಉತ್ತರ ಕೊಡಬೇಕು, ಈಗ ತಮಿಳುನಾಡು ಚುನಾವಣೆ ಮುಗಿದಿದೆ. ನಾನು ಸ್ವಲ್ಪ ತೋಟದ ಕೆಲಸ ಮಾಡಿಸುತ್ತಿದ್ದೇನೆ. ಬೇಸಿಗೆ ಮುಗಿಯುತ್ತಿದೆ. ಮಳೆಗಾಲ ಬರುತ್ತಿದೆ. ಅಷ್ಟರಲ್ಲಿ ನಾನು ಕೆಲಸ ಮುಗಿಸಬೇಕು, ಅದೆಲ್ಲ ಮುಗಿಸಿ ಬರುವೆ, ಅಲ್ಲಿಯವರೆಗೂ ನಿಮ್ಮ ಕೆಲಸದಲ್ಲಿ ನೀವಿರುತ್ತೀರಾ? ಅಥವಾ ಇದೇ ರೀತಿ ತಂಟೆ-ತರಲೆ ಮಾಡುತ್ತಿರುತ್ತೀರಾ ನಿಮಗೆ ಬಿಟ್ಟಿದ್ದು’ ಎಂದು ವಿರೋಧಿಗಳಿಗೆ ಹೇಳಿದ್ದಾರೆ ಪ್ರಕಾಶ್ ರಾಜ್.

Leave a Reply

Your email address will not be published. Required fields are marked *

error: Content is protected !!