ಉದಯವಾಹಿನಿ, ಐಪಿಎಲ್ ಸೀಸನ್ ಚಾಲ್ತಿಯಲ್ಲಿದೆ. ಕೋಟ್ಯಂತರ ಮಂದಿ ಟಿವಿಗಳಲ್ಲಿ ಪಂದ್ಯಗಳನ್ನು ನೋಡುತ್ತಿದ್ದಾರೆ. ಕ್ರೀಡಾಂಗಣಕ್ಕೆ ಹೋಗಿ ಪಂದ್ಯ ನೋಡಲಂತೂ ನೂಕು-ನುಗ್ಗಲಿದೆ. ಟಿಕೆಟ್ಗಳೇ ಸಿಗುತ್ತಿಲ್ಲ. ಸಿಕ್ಕರು ಬ್ಲಾಕ್ನಲ್ಲಿ ಒಂದಕ್ಕೆ ಹತ್ತರಷ್ಟು ಬೆಲೆ. ಆದರೆ ಇದೀಗ ನಟಿ, ಇನ್ಸ್ಟಾಗ್ರಾಂ ಇನ್ಫ್ಲ್ಯುಯೆನ್ಸರ್ ಒಬ್ಬರು ತಮಗೆ ಸಿಕ್ಕಿದ್ದ ಐಪಿಎಲ್ ಟಿಕೆಟ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ದೊಡ್ಡ ಸುದ್ದಿಯಾಗಿದೆ. ಏಕೆಂದರೆ ನಟಿ ಹಂಚಿಕೊಂಡಿದ್ದಿದ್ದು ವಿವಿಐಪಿ ಟಿಕೆಟ್ ಅದೂ ಮಾರಾಟದ ಟಿಕೆಟ್ ಅಲ್ಲ ಬದಲಿಗೆ ಕಾಯ್ದಿರಿಸಿದ ಟಿಕೆಟ್. ಟಿಕೆಟ್ ಚಿತ್ರಗಳು ವೈರಲ್ ಆಗುತ್ತಿದ್ದಂತೆ ಎಲ್ಲರ ಕಣ್ಣು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮೇಲೆ ಬಿದ್ದಿದೆ.
ತೆಲಂಗಾಣದಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕುಶಿತಾ ಕಲ್ಲಪು ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ಟಿಕೆಟ್ನ ಚಿತ್ರಗಳನ್ನು ಹಂಚಿಕೊಂಡಿದ್ದರು. ಹೈದರಾಬಾದ್‌ನಲ್ಲಿ ನಡೆದ ಐಪಿಎಲ್ ಪಂದ್ಯದ ಟಿಕೆಟ್ಗಳವು. ಆದರೆ ಅವು ಸಾಮಾನ್ಯ ಟಿಕೆಟ್ ಆಗಿರಲಿಲ್ಲ ವಿವಿಐಪಿ ಪಾಸ್‌ಗಳಾಗಿದ್ದವು. ಸೂಕ್ಷ್ಮವಾಗಿ ಗಮನಿಸಿದರೆ ಆ ಟಿಕೆಟ್ಗಳು ಸರ್ಕಾರದ ಉನ್ನತ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮೀಸಲಿಟ್ಟಿದ್ದ ಟಿಕೆಟ್ಗಳಾಗಿದ್ದವು. ಸೋಷಿಯಲ್ ಮೀಡಿಯಾ ಬಳಕೆದಾರರು ಆ ಪಾಸ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅವು ಮುಖ್ಯಮಂತ್ರಿಗಳ ಕಚೇರಿ ಅಥವಾ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುವ ‘ಕಾಂಪ್ಲಿಮೆಂಟರಿ’ ಕೋಟಾದ ಪಾಸ್‌ಗಳು ಎಂಬುದು ಬೆಳಕಿಗೆ ಬಂದಿದೆ. ಇದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಕಚೇರಿಯಿಂದಲೇ ಕುಶಿತಾಗೆ ತಲುಪಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳು ಟಿಕೆಟ್‌ಗಾಗಿ ಗಂಟೆಗಟ್ಟಲೆ ಕ್ಯೂ ನಿಂತು ಅಥವಾ ಆನ್‌ಲೈನ್‌ನಲ್ಲಿ ಪರದಾಡುತ್ತಿರುವಾಗ, ಇನ್‌ಫ್ಲುಯೆನ್ಸರ್‌ಗಳಿಗೆ ಇಂತಹ ಪ್ರೀಮಿಯಂ ಪಾಸ್‌ಗಳು ಸುಲಭವಾಗಿ ಸಿಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು. ಇದು ‘ವಿಐಪಿ ಸಂಸ್ಕೃತಿ’ಯ ದುರುಪಯೋಗ ಎಂದು ಟೀಕಿಸಲಾಗುತ್ತಿದೆ.
