ಉದಯವಾಹಿನಿ, ಕೋಲ್ಕತ್ತಾ: ಸತತ ಸೋಲಿನಿಂದ ಕಂಗೆಟ್ಟಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡ ಕೊನೆಗೂ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆದಿದೆ. ರಿಂಕು ಸಿಂಗ್, ಅನುಕೂಲ್ ರಾಯ್ ಅವರ ಸಿಕ್ಸರ್, ಬೌಂಡರಿ ಭರ್ಜರಿ ಆಟದಿಂದ ಕೆಕೆಆರ್, ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.
ರಿಂಕು, ರಾಯ್ ಹೋರಾಟ: ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕೆಕೆಆರ್ ಗೆಲುವಿನ ವಿಶ್ವಾಸವನ್ನೇ ಕಳೆದುಕೊಂಡಿತ್ತು. ಇತ್ತ ರಿಂಕು ಅವರ ನಿಧಾನಗತಿಯ ಬ್ಯಾಟಿಂಗ್ ಕೂಡ ಭರವಸೆ ಹುಸಿ ಮಾಡುವಂತಿತ್ತು. ಆದ್ರೆ ಸಮಯೋಚಿತ ಬ್ಯಾಟಿಂಗ್ ನಡೆಸಿದ ರಿಂಕು ಸಿಂಗ್ ಡೆತ್ ಓವರ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇದರೊಂದಿಗೆ ಆಲ್‌ರೌಂಡರ್ ಅನುಕೂಲ್ ರಾಯ್ ಅವರ ಸಾಥ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು. ಆರ್‌ಆರ್ ಬೌಲರ್‌ಗಳ ವಿರುದ್ಧ ಅಬ್ಬರಿಸಿದ ಅನುಕೂಲ್ – ರಿಂಕು ಜೋಡಿ ಮುರಿಯದ 7ನೇ ವಿಕೆಟ್‌ಗೆ 37 ಎಸೆತಗಳಲ್ಲಿ ಸ್ಫೋಟಕ 76 ರನ್‌ಗಳ ಜೊತೆಯಾಟ ನೀಡಿತು. ರಿಂಕು ಸಿಂಗ್ 34 ಎಸೆತಗಳಲ್ಲಿ ಸ್ಫೋಟಕ 53 ರನ್ (5 ಬೌಂಡರಿ, 2 ಸಿಕ್ಸರ್) ಚಚ್ಚಿದ್ರೆ, ಅನುಕೂಲ್ ರಾಯ್ 16 ಎಸೆತಗಳಲ್ಲಿ 29 ರನ್ ಚಚ್ಚಿದ್ರು. ಇನ್ನುಳಿದಂತೆ ಕ್ಯಾಮರೂನ್ ಗ್ರೀನ್, 27 ರನ್, ರೋವ್ಮನ್ ಪೋವೆಲ್ 23 ರನ್, ರಮಣದೀಪ್ ಸಿಂಗ್ ಅವರ 10 ರನ್‌ಗಳ ಕೊಡುಗೆ ತಂಡಕ್ಕೆ ನೆರವಾಯಿತು.
ಈಡನ್ ಗಾರ್ಡನ್ ಮೈದಾನದಲ್ಲಿಂದು ನಡೆದ 28ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಬಾರಿಸಿತ್ತು. ಗೆಲುವಿಗೆ 156 ರನ್ ಗುರಿ ಪಡೆದ ಕೆಕೆಆರ್ 19.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 161 ರನ್ ಬಾರಿಸಿ ಜಯ ತನ್ನದಾಗಿಸಿಕೊಂಡಿತು. ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ಆರಂಭಿಕ ಜೋಡಿಯ ಯಶಸ್ವಿ ಆಟಡಿಂದ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತ್ತು. ಕ್ರೀಸ್‌ಗಿಳಿದ ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ – ವೈಭವ್ ಸೂರ್ಯವಂಶಿ ಜೋಡಿ ಆರಂಭದಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ ವಿಕೆಟ್‌ಗೆ ಈ ಜೋಡಿ 8.4 ಓವರ್‌ಗಳಲ್ಲಿ 81 ರನ್ ಬಾರಿಸಿತ್ತು. ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ವೈಭವ್ ಸೂರ್ಯವಂಶಿ 28 ಎಸೆತಗಳಲ್ಲಿ 46 ರನ್ (2 ಸಿಕ್ಸರ್, 6 ಬೌಂಡರಿ) ಚಚ್ಚಿ ಔಟಾದ್ರೆ, ಜೈಸ್ವಾಲ್ 29 ಎಸೆತಗಳಲ್ಲಿ 39 ರನ್ (2 ಸಿಕ್ಸರ್, 4 ಬೌಂಡರಿ) ಬಾರಿಸಿ ಪೆವಿಲಿಯನ್‌ಗೆ ಮರಳಿದ್ರು. ಈ ಆರಂಭಿಕ ಜೋಡಿಯ ವಿಕೆಟ್ ಪತನಗೊಳ್ಳುತ್ತಿದ್ದಂತೆ ಪೆವಿಲಿಯನ್ ಪರೇಡ್ ಶುರುವಾಯಿತು. ನಾಯಕ ರಿಯಾನ್ ಪರಾಗ್ ಸೇರಿದಂತೆ ಉಳಿದೆಲ್ಲರೂ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದರು. ಒಂದೆಡೆ ಸ್ಪಿನ್ ಮ್ಯಾಜಿಕ್ ಪ್ರಯೋಗಿಸಿದ ಕೆಕೆಆರ್, ಅಗ್ರ ಬ್ಯಾಟರ್‌ಗಳನ್ನ ಖೆಡ್ಡಕ್ಕೆ ಕೆಡವುವಲ್ಲಿ ಯಶಸ್ವಿಯಾಯಿತು.
