
ಉದಯವಾಹಿನಿ,
ಭೋಪಾಲ್ : ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಚೀತಾ ‘ಧಾತ್ರಿ’ ಬುಧವಾರ ಬೆಳಗ್ಗೆ ಮೃತಪಟ್ಟಿದೆ. ಕಳೆದ ಐದು ತಿಂಗಳ ಅವಧಿಯಲ್ಲಿ ಮೃತಪಟ್ಟ ಚೀತಾಗಳ ಸಂಖ್ಯೆ 9ಕ್ಕೇರಿದೆ. ‘ಧಾತ್ರಿ’ ಸಾವಿಗೆ ಕಾರಣ ತಿಳಿದುಬಂದಿಲ್ಲ. ‘ಧಾತ್ರಿ’ಯ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು ವರದಿ ಬಂದ ಕೂಡಲೇ ನಿಖರವಾದ ಕಾರಣ ತಿಳಿಯಲಿದೆ ಎಂದು ಉದ್ಯಾನವನದ ಅಧಿಕಾರಿಗಳು ಹೇಳಿದ್ದಾರೆ.
ಉದ್ಯಾನವನದಲ್ಲಿರುವ 14 ಚೀತಾಗಳು ಆರೋಗ್ಯವಾಗಿವೆ. ಇವುಗಳಲ್ಲಿ 7 ಗಂಡು, 6 ಹೆಣ್ಣು ಸೇರಿದಂತೆ ಒಂದು ಮರಿ ಚೀತಾ ಇದೆ. ಇವುಗಳ ಆರೋಗ್ಯವನ್ನು ಉದ್ಯಾನವನದ ವನ್ಯಜೀವಿ ಪಶುವೈದ್ಯರು ಮತ್ತು ನಮೀಬಿಯಾದ ತಜ್ಞರು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
