ಉದಯವಾಹಿನಿ, ಬೀಜಿಂಗ್ : ‘ಚೀನಾವು ತನ್ನ ಕಾರ್ಯತಂತ್ರದ ಒಪ್ಪಂದಗಳನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ಮಿತ್ರರಾಷ್ಟ್ರ ಪಾಕಿಸ್ತಾನದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ’ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಹೇಳಿದರು. ಪ್ರಾದೇಶಿಕ ಸಂಪರ್ಕಕ್ಕಾಗಿ ಮಹತ್ವಾಕಾಂಕ್ಷೆಯ ಚೀನಾ- ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ (ಸಿಪಿಇಸಿ) ಮೂಲಸೌಕರ್ಯ ಯೋಜನೆಯ 10ನೇ ವಾರ್ಷಿಕೋತ್ಸವವನ್ನು ಸೋಮವಾರ ಇಸ್ಲಾಮಾಬಾದ್‌ನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಭಿನಂದನಾ ಸಂದೇಶ ನೀಡಿದ ಜಿನ್‌ಪಿಂಗ್ ಅವರು, ‘ಸಿಪಿಇಸಿಯು ಒಂದು ಪ್ರಮುಖ ಯೋಜನೆ. ಉನ್ನತ ಗುಣಮಟ್ಟದ, ಸುಸ್ಥಿರ ಮತ್ತು ಜೀವನೋಪಾಯ ಹೆಚ್ಚಿಸುವ ಫಲಿತಾಂಶಗಳ ಗುರಿ ಸಾಧಿಸಲು ಚೀನಾ ನಿರಂತರವಾಗಿ ಪಾಕಿಸ್ತಾನದೊಂದಿಗೆ ಕೆಲಸ ಮಾಡುತ್ತದೆ’ ಎಂದಿದ್ದಾರೆ.’ಚೀನಾ ಮತ್ತು ಪಾಕಿಸ್ತಾನ ವ್ಯಾಪಕ ಸಮಾಲೋಚನೆ, ಜಂಟಿ ಕೊಡುಗೆ ಮತ್ತು ಹಂಚಿಕೆಯ ಪ್ರಯೋಜನಗಳ ತತ್ವದ ಅಡಿಯಲ್ಲಿ ಸಿಪಿಇಸಿಯನ್ನು ಮುನ್ನಡೆಸುತ್ತಿದೆ. ಈ ಯೋಜನೆಯಿಂದಾಗಿ ಹಲವಾರು ಕಾರ್ಯಗಳನ್ನು ಸಾಧಿಸಲಾಗಿದೆ’ ಎಂದು ಜಿನ್‌ಪಿಂಗ್ ಹೇಳಿದ್ದಾರೆ . 
