ಉದಯವಾಹಿನಿ, ಟರೌಬಾ, ಟ್ರಿನಿಡಾಡ್: ವೆಸ್ಟ್ ಇಂಡೀಸ್ ತಂಡದ ಎದುರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಸರಣಿ ಗೆದ್ದಿರುವ ಭಾರತ ತಂಡವು ಟಿ20 ಸರಣಿಯಲ್ಲಿಯೂ ಗೆಲ್ಲುವ ನೆಚ್ಚಿನ ಬಳಗವಾಗಿ ಕಣಕ್ಕಿಳಿಯಲಿದೆ. ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ವಿಶ್ರಾಂತಿ ಪಡೆದಿದ್ದು ಯುವ ಆಟಗಾರರಿಗೆ ಅವಕಾಶ ದೊರೆಯಲಿದೆ.
ಮೂರನೇ ಏಕದಿನ ಪಂದ್ಯದಲ್ಲಿ ಮಿಂಚಿದ್ದ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಅವರು ಟಿ20 ಪಂದ್ಯದಲ್ಲಿಯೂ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ.ಟೆಸ್ಟ್ ಪದಾರ್ಪಣೆಯಲ್ಲಿ ಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್ ಅವರಿಗೆ ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್ ಪಂದ್ಯದಲ್ಲಿಯೂ ‘ಇನಿಂಗ್ಸ್‌’ ಆರಂಭಿಸುವ ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ. ವಿಕೆಟ್‌ ಕೀಪರ್ ಸಂಜು ಸ್ಯಾಮ್ಸನ್ ಮತ್ತು ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವಿಭಾಗದ ಶಕ್ತಿಯಾಗಿದ್ದಾರೆ.
ಎಡಗೈ ಆಲ್‌ರೌಂಡರ್ ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅನುಭವಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ಯುವ ಆಟಗಾರ ರವಿ ಬಿಷ್ಣೋಯಿ ಅವರಲ್ಲಿ ಇಬ್ಬರು ಅಥವಾ ಮೂವರಿಗೆ ಕಣಕ್ಕಿಳಿಯುವ ಅವಕಾಶ ಸಿಗಬಹುದು. ಎಡಗೈ ಮಧ್ಯಮವೇಗಿ ಆರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ಅವರು ಮೊಹಮ್ಮದ್ ಸಿರಾಜ್ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ವಿಭಾಗದ ಹೊಣೆ ನಿಭಾಯಿಸುವರು. ಮೂರನೇ ವೇಗಿಯಾಗಿ ಆವೇಶ್ ಖಾನ್ ಅಥವಾ ಮುಕೇಶ್ ಕುಮಾರ್ ಅವರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು. ಆದರೆ ಹಾರ್ದಿಕ್ ಪಾಂಡ್ಯ ಕೂಡ ಮಧ್ಯಮವೇಗದ ಬೌಲಿಂಗ್ ಮಾಡುವುದರಿಂದ ಇಬ್ಬರು ವೇಗಿಗಳು ಕಣಕ್ಕಿಳಿಯಬಹುದು.

Leave a Reply

Your email address will not be published. Required fields are marked *

error: Content is protected !!