ಉದಯವಾಹಿನಿ, ಲಕ್ನೋ, : ಮದುವೆ ಎಲ್ಲವೂ ಸುಸೂತ್ರವಾಗಿ ನೆರವೇರಿತ್ತು, ವಧುವನ್ನು ಬೀಳ್ಕೊಡುವ ಭಾವುಕ ಕ್ಷಣ ಅದು. ಆ ಸಮಯದಲ್ಲಿ ಬೀದಿ ನಾಯಿ ಮಂಟಪಕ್ಕೆ ನುಗ್ಗಿ ಅತಿಥಿಗಳ ಮೇಲೆ ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಬುಡೌನ್ನಲ್ಲಿ ನಡೆದಿದೆ. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸಭಾಂಗಣದಲ್ಲಿ ಕಾಲ್ತುಳಿತದಂತಹ ಸನ್ನಿವೇಶ ಬಿಸೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲ್ಸಿ ರಸ್ತೆಯಲ್ಲಿರುವ ಅಭಿನಂದನ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ಈ ಘಟನೆ ಜರುಗಿದೆ. ನಾಯಿ ಆವರಣಕ್ಕೆ ನುಗ್ಗಿ ಸಿಕ್ಕಸಿಕ್ಕವರ ಮೇಲೆ ಮನಬಂದಂತೆ ದಾಳಿ ಮಾಡಲಾರಂಭಿಸಿತು. ಇದರಿಂದ ಭಯಭೀತರಾದ ಮಹಿಳೆಯರು ಮತ್ತು ಮಕ್ಕಳು ಸುರಕ್ಷತೆಗಾಗಿ ಓಡಲಾರಂಭಿಸಿದರು. ಈ ಅವಸರದಲ್ಲಿ ಕೆಲವರು ಬಿದ್ದು ಗಾಯಗೊಂಡರೆ, ಇನ್ನು ಕೆಲವರು ಕಾಲ್ತುಳಿತದಂತಹ ಪರಿಸ್ಥಿತಿಗೆ ಸಿಲುಕಿದರು.
ಸಭಾಂಗಣದ ಒಳಗೆ ತನ್ನ ಅಟ್ಟಹಾಸ ಮೆರೆದ ನಾಯಿ, ನಂತರ ರಸ್ತೆಗೆ ಜಿಗಿದು ದಾರಿಹೋಕರು ಮತ್ತು ಅಂಗಡಿಯವರ ಮೇಲೂ ದಾಳಿ ನಡೆಸಿತು. ಅಷ್ಟಕ್ಕೇ ನಿಲ್ಲದೆ ಸಮೀಪದ ಹಳ್ಳಿಗೆ ಓಡಿಹೋಗಿ ಅಲ್ಲಿನ ದನಕರುಗಳನ್ನೂ ಕಚ್ಚಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 9 ವರ್ಷದ ಮಗುವಿನಿಂದ ಹಿಡಿದು 66 ವರ್ಷದ ವೃದ್ಧರವರೆಗೆ ಈ ದಾಳಿಗೆ ತುತ್ತಾಗಿದ್ದಾರೆ.
ಚಿಕಿತ್ಸೆಗಾಗಿ ಆಸ್ಪತ್ರೆಗೆ ಮುಗಿಬಿದ್ದ ಜನ ಗಾಯಗೊಂಡವರನ್ನು ತಕ್ಷಣ ಬಿಸೌಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲಾಯಿತು. ಸಿಎಚ್‌ಸಿ ವೈದ್ಯಾಧಿಕಾರಿ ಅರವಿಂದ್ ವರ್ಮಾ ಅವರ ಪ್ರಕಾರ, ಅಂದು ಸುಮಾರು 109 ಜನರು ರೇಬೀಸ್ ವಿರೋಧಿ ಚುಚ್ಚುಮದ್ದಿಗಾಗಿ ನೋಂದಾಯಿಸಿಕೊಂಡಿದ್ದು, ಅವರಲ್ಲಿ 60ಕ್ಕೂ ಹೆಚ್ಚು ಜನರು ಮದುವೆಗೆ ಬಂದ ಅತಿಥಿಗಳಾಗಿದ್ದಾರೆ, ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಈಗ ಬಿಡುಗಡೆ ಮಾಡಲಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಕೋಪಕ್ಕೆ ಕಾರಣವಾಗಿದೆ.
