ಉದಯವಾಹಿನಿ, ಹೈದರಾಬಾದ್: ವಿಶ್ವದ ಅತಿದೊಡ್ಡ ಫಿಲ್ಮ್ ಸಿಟಿ ಮತ್ತು ಥೀಮ್ ಪಾರ್ಕ್ ಖ್ಯಾತಿಯ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬೇಸಿಗೆಯ ಮೋಜು ಶುರುವಾಗಿದೆ. ಗುರುವಾರ (ಎ.24)ದಿಂದ 46 ದಿನಗಳ ಕಾಲ ಪ್ರವಾಸಿಗರು ಈ ಹಬ್ಬದಲ್ಲಿ ಮಿಂದೇಳಬಹುದಾಗಿದೆ.
ರಾಮೋಜಿ ಫಿಲ್ಮ್ ಸಿಟಿಯಲ್ಲಿ ಜೂನ್ 7ರ ವರೆಗೆ ಕಾರ್ನೀವಲ್ ಇದ್ದು, ಬೆಳಗ್ಗೆಯಿಂದ ರಾತ್ರಿ 9ರವರೆಗೆ ಪ್ರವಾಸಿಗರು ತಮ್ಮ ರಜಾದಿನವನ್ನು ಇಲ್ಲಿ ಮತ್ತಷ್ಟು ಸಂಭ್ರಮಿಸಬಹುದಾಗಿದೆ. ವಿಶೇಷವಾಗಿ ಮಕ್ಕಳ ಗಮನ ಸೆಳೆಯುವ ಉದ್ದೇಶದಿಂದ ಹಲವಾರು ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕುಟುಂಬದೊಂದಿಗೆ ಈ ಬೇಸಿಗೆಯ ರಜೆಯನ್ನು ಸ್ಮರಣೀಯವಾಗಿಸಬಹುದು.
ರಾಮೋಜಿ ಫಿಲ್ಮ್ ಸಿಟಿಯ ಹಾಲಿಡೇ ಕಾರ್ನೀವಲ್ನಲ್ಲಿ ಮನೋರಂಜನೆ ಜೊತೆಗೆ ಸಿನಿಮಾ ಜಗತ್ತಿನ ಮೋಜು ಕೂಡ ಇದು, ಮೊದಲ ದಿನದಂದಲೇ ಪ್ರವಾಸಿಗರನ್ನು ಆಕರ್ಷಿಸಲಿದೆ. ಇಲ್ಲಿನ ಅನೇಕ ವಿಶೇಷ ಆಕರ್ಷಣೆಗಳಾದ ಮ್ಯೂಸಿಕಲ್ ಗ್ಲೋ ಗಾರ್ಡನ್, ಹೊಸ ಮಾಯಾಲೋಕ, ಕಾರ್ನಿವಲ್ ಪೆರೇಡ್ ಪ್ರವಾಸಿಗರನ್ನು ಮೋಡಿ ಮಾಡುತ್ತವೆ. ಮಾಯಾಲೋಕ ಎಂಬ ಹೊಸ ಆಕರ್ಷಣೆ: ಪ್ರಸಿದ್ಧ ಚಲನಚಿತ್ರ ಸೆಟ್‌ಗಳ ಹಿಂದಿನ ಮ್ಯಾಜಿಕ್ ಅನ್ನು ನೇರವಾಗಿ ನೋಡಲು ಮಾಯಾಲೋಕ ಅವಕಾಶವನ್ನು ಒದಗಿಸುತ್ತದೆ. ಚಲನಚಿತ್ರ ನಿರ್ಮಾಣ ರೀತಿ, ಸೆಟ್‌ಗಳ ವಿನ್ಯಾಸದಲ್ಲಿನ ಕೌಶಲ್ಯ ಮತ್ತು ಸೃಜನಶೀಲತೆ ಪ್ರವಾಸಿಗರಿಗೆ ಹೊಸ ಪ್ರಪಂಚದ ಪರಿಚಯ ಮಾಡಲಿದೆ.
ಮೈರೋಮಾಂಚನಗೊಳಿಸುವ ಪೆರೇಡ್: ವರ್ಣರಂಜಿತ ಅಲಂಕಾರಗಳು, ಮೆರವಣಿಗೆಗಳು ಮತ್ತು ವಿವಿಧ ವೇಷಭೂಷಣಗಳನ್ನು ಧರಿಸಿದ ಕಲಾವಿದರೊಂದಿಗೆ ಸಾಗುವ ಕಾರ್ನೀವಲ್ ಮೆರವಣಿಗೆ ನಿಮ್ಮ ಚಿತ್ತ ಸೆಳೆಯುತ್ತದೆ. ಕುಟುಂಬ ಸದಸ್ಯರು ಮತ್ತು ಸಂಬಂಧಿಕರೊಂದಿಗೆ ಬರುವವರಿಗೆ ಈ ಕಾರ್ನೀವಲ್ ಮೆರವಣಿಗೆಯಲ್ಲಿ ಸಂಗೀತಕ್ಕೆ ನೃತ್ಯ ಮಾಡುವ ಅವಕಾಶ ಮರೆಯಲಾಗದ ಅನುಭವ ನೀಡುತ್ತದೆ.
ಮ್ಯೂಸಿಕಲ್ ಗ್ಲೋ ಗಾರ್ಡನ್‌ನ ಸೌಂದರ್ಯಗಳು: ಚಿತ್ರದ ಥೀಮ್ ಆಧರಿಸಿ ಅಲಂಕರಿಸಲಾದ ಮ್ಯೂಸಿಕಲ್ ಗ್ಲೋ ಗಾರ್ಡನ್ ಎಲ್ಲರನ್ನೂ ಆಕರ್ಷಿಸುತ್ತದೆ. ದೀಪಗಳ ಬೆಳಕಿನೊಂದಿಗೆ ಸಂಗೀತದ ಆಹ್ಲಾದಕರ ವಾತಾವರಣ ಪ್ರವಾಸಿಗರ ಮನಸ್ಸನ್ನು ಮುಟ್ಟುತ್ತದೆ.
