
ಉದಯವಾಹಿನಿ, ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದ ಬೆಂಗಳೂರಿನ 6 ಮಂದಿ ಪ್ರವಾಸಿಗರು ಲಿಫ್ಟ್ ಕುಸಿದು ಗಾಯಗೊಂಡಿದ್ದಾರೆ. ಶ್ರೀನಗರ ಹೋಟೆಲ್ನಲ್ಲಿ ಘಟನೆ ನಡೆದಿದೆ. ಲಿಫ್ಟ್ ಓವರ್ಲೋಡ್ ಆಗಿ ಕಾರ್ಯಾಚರಣೆಗೆ ತೊಡಕಾಗಿ ಅನಾಹುತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
“6 ಜನರ ಸಾಮರ್ಥ್ಯದ ಲಿಫ್ಟ್ನಲ್ಲಿ 11 ಜನರು ಪ್ರವೇಶಿಸಿದ್ದಾರೆ. ಇದರಿಂದ ಓವರ್ಲೋಡ್ ಆಗಿ ಲಿಫ್ಟ್ ದಿಢೀರ್ ಕುಸಿದಿದೆ” ಎಂದು ಹೈದರ್ಪೋರಾದ ಅರಿಸನ್ ಐಷಾರಾಮಿ ಹೋಟೆಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.ಹೋಟೆಲ್ ಸಿಬ್ಬಂದಿ ಲಿಫ್ಟ್ ಪ್ಯಾನೆಲ್‌ಗಳನ್ನು ತೆರೆದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಓರ್ವ ವ್ಯಕ್ತಿಯ ಮೂಳೆ ಮುರಿದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು ವೆಂಕಟೇಶ್(65), ಮಂಗಳ(54), ಕುಶಲ್ಲಾ(18), ಪಂಕಜಾ(16), ವೆಂಕಟಲಕ್ಷ್ಮಮ್ಮ(60), ಮತ್ತು ಸೌಭಾಗ್ಯ(60) ಎಂದು ಗುರುತಿಸಲಾಗಿದೆ. ಬೆಂಗಳೂರಿನ ನಿವಾಸಿಗಳಾಗಿರುವ ಇವರು ಗುರುವಾರ ಶ್ರೀನಗರಕ್ಕೆ ಆಗಮಿಸಿದ್ದು, ಐದು ದಿನಗಳ ಕಾಲ ಹೋಟೆಲ್ ಬುಕ್ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಬೇಸಿಗೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ನೈಸರ್ಗಿಕ ಸೌಂದರ್ಯ, ಶ್ರೀನಗರದ ಪ್ರಸಿದ್ಧ ದಾಲ್ ಸರೋವರ ಮತ್ತು ಇಂದಿರಾ ಗಾಂಧಿ ಟುಲಿಪ್ ಉದ್ಯಾನ ನೋಡಲು ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
