ಉದಯವಾಹಿನಿ, ನವದೆಹಲಿ: 1986ರಲ್ಲಿ ಪತ್ನಿಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ನಾಲ್ಕು ದಶಕಗಳ ಬಳಿಕ ದೆಹಲಿ ಪೊಲೀಸರು ಬಂಧಿಸಿದ್ದಾರೆ. 40 ವರ್ಷ ತನ್ನ ಗುರುತು ಮರೆಮಾಚಿ ಬದುಕುತ್ತಿದ್ದ 82 ವರ್ಷದ ಆರೋಪಿ ಸೆರೆ ಸಿಕ್ಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ದೆಹಲಿಯ ನಂಗ್ಲಿ ಪೂನಾ ಪ್ರದೇಶದ ಫ್ಯಾಕ್ಟರಿಯಲ್ಲಿ ವಾಸಿಸುತ್ತಿದ್ದ ಬಿಹಾರದ ನಳಂದದ ಚಂದ್ರ ಶೇಖರ್ ಪ್ರಸಾದ್ ಬಂಧಿತ ಆರೋಪಿಪ್ರಕರಣದ ವಿವರ: 1986ರ ಅಕ್ಟೋಬರ್ 19ರಂದು ಪೂರ್ವ ದೆಹಲಿಯ ಶಂಕರ್ಪುರದಲ್ಲಿ ವಾಸವಿದ್ದ ಪ್ರಸಾದ್, ತನ್ನ ಪತ್ನಿಯ ಶೀಲ ಶಂಕಿಸಿ ಇಟ್ಟಿಗೆಯಿಂದ ತಲೆಗೆ ಹಲ್ಲೆ ನಡೆಸಿ ಕೊಂದಿದ್ದ. ಈ ಘಟನೆಯ ಸಂದರ್ಭದಲ್ಲಿ ಮನೆ ಸಹಾಯಕನಿಗೆ ಬಂದೂಕು ತೋರಿಸಿ, ಆರೋಪಿ ಪತಿ ಮತ್ತು ಆತನ ಸಹಚರರು ಸ್ಥಳದಿಂದ ಪರಾರಿಯಾಗಿದ್ದರು.
ಈ ಸಂಬಂಧ ಶಂಕರ್‌ಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 34 (ಸಾಮಾನ್ಯ ಉದ್ದೇಶದಿಂದ ಮಾಡಿದ ಅಪರಾಧ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆದರೆ, ಆರೋಪಿ ಬಂಧನದಿಂದ ತಪ್ಪಿಸಿಕೊಂಡಿದ್ದ. ಈತನ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ 1987ರಲ್ಲಿ ನ್ಯಾಯಾಲಯ ಈತನನ್ನು ತಲೆಮರೆಸಿಕೊಂಡವ ಎಂದು ಘೋಷಿಸಿತ್ತು. ಪ್ರಕರಣ ಪ್ರಗತಿ ಕಾಣದೇ ಇರುವುದು ಹಾಗೂ ಆಗಿನ ಕಾಲದಲ್ಲಿ ಆರೋಪಿಯ ಪತ್ತೆಗೆ ಆಧುನಿಕ ತನಿಖಾ ಸಾಧನಗಳ ಕೊರತೆಯಿಂದಾಗಿ ಸುಮಾರು 40 ವರ್ಷದಿಂದ ನೆನೆಗುದಿಗೆ ಬಿದ್ದಿತ್ತು. ಆಗಿನ ಕಾಲದಲ್ಲಿ ಆರೋಪಿಯ ಪತ್ತೆಗೆ ಯಾವುದೇ ಫೋಟೋ, ಆಧಾರ್ ದತ್ತಾಂಶ, ಡಿಜಿಟಲ್ ಮಾಹಿತಿ ಅಥವಾ ಮೊಬೈಲ್ ಪತ್ತೆ ಇಲ್ಲದೇ ಇದ್ದ ಹಿನ್ನೆಲೆಯಲ್ಲಿ ಈತನ ಸುಳಿವು ಸಿಕ್ಕಿರಲಿಲ್ಲ.ಇತ್ತೀಚಿಗೆ ಪ್ರಕರಣವನ್ನು ದೆಹಲಿ ಕ್ರೈಂ ಬ್ರಾಂಚ್ ಅಧಿಕಾರಿಗಳು ಪುನಃ ತೆರೆದಿದ್ದರು. ಇದೀಗ ಮಾನವ ಬುದ್ಧಿಮತ್ತೆ ಮತ್ತು ತಾಂತ್ರಿಕ ಕಣ್ಗಾವಲಿನ ಫಲದಿಂದ ಆರೋಪಿಯ ಸುಳಿವು ಸಿಕ್ಕಿದ್ದು, ಕೊನೆಗೂ ಬಂಧಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ತನಿಖಾಧಿಕಾರಿಗಳಿಗೆ ಆರೋಪಿಯ ಮಕ್ಕಳು ದೆಹಲಿ ಮತ್ತು ಬಿಹಾರದಲ್ಲಿ ನೆಲೆಸಿರುವುದು ಗೊತ್ತಾಯಿತು. ಕುಟುಂಬಕ್ಕೆ ಸಂಬಂಧಿಸಿದ ಶಂಕಿತ ಮೊಬೈಲ್ ಸಂಖ್ಯೆಗಳ ಮೇಲ್ವಿಚಾರಣೆ ನಡೆಸಲಾಯಿತು. ನಳಂದದಲ್ಲಿ ಪರಿಶೀಲನೆ ಸಂದರ್ಭ ಪ್ರಸಾದ್ ಜೀವಂತವಾಗಿದ್ದು, ಕುಟುಂಬ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವುದು ತಿಳಿದು ಬಂದಿದೆ. ಈ ಮಾಹಿತಿ ಆಧರಿಸಿ ಕಣ್ಗಾವಲು ಹೆಚ್ಚಿಸಿದ ಪೊಲೀಸರು ಆತನ ಚಲನವಲನ ಪತ್ತೆ ಹಚ್ಚಿದ್ದು, ಏಪ್ರಿಲ್ 22ರಂದು ಅಲಿಪುರ ಕಾರ್ಖಾನೆಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಚಾರಣೆಯಲ್ಲಿ ಪ್ರಸಾದ್, ಕೊಲೆ ಮಾಡಿರುವ ಕುರಿತು ತಪ್ಪೊಪ್ಪಿಕೊಂಡಿದ್ದಾನೆ. ಪತ್ನಿಯ ಶೀಲ ಶಂಕಿಸಿ ಹತ್ಯೆ ಮಾಡಿದ್ದಾಗಿ ತಿಳಿಸಿದ್ದಾನೆ.
ಆರೋಪಿ ಬಿಹಾರ, ಪಂಜಾಬ್, ಹರಿಯಾಣ, ದೆಹಲಿ ಸೇರಿದಂತೆ ವಿವಿಧೆಡೆ ವಾಸಿಸುತ್ತಿದ್ದು, ದಶಕಗಳ ಕಾಲ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಪೊಲೀಸರ ಕಣ್ತಪ್ಪಿಸಲು ಪಂಜಾಬ್ನ ಪಟಿಯಾಲದಲ್ಲಿ ರಿಕ್ಷಾ ಚಾಲಕ, ಹರಿಯಾಣದಲ್ಲಿ ಆಶ್ರಮದಲ್ಲಿ ವಾಸಿಸುತ್ತಿದ್ದುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
