ಉದಯವಾಹಿನಿ, ಹಜಾರಿಬಾಗ್(ಜಾರ್ಖಂಡ್): ಇಲ್ಲಿನ ಚೌಪರನ್ ಪೊಲೀಸ್ ಠಾಣೆ ವ್ಯಾಪ್ತಿಯ ದನುವಾ ಕಣಿವೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಒಂದೇ ಕುಟುಂಬದ ಐವರು ಸೇರಿದ್ದಾರೆ. ಮದುವೆ ಸಮಾರಂಭಕ್ಕೆಂದು ಧನಬಾದ್‌ನಿಂದ ಬಿಹಾರದ ಶೇರ್‌ಘಾಟಿಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಜರುಗಿದೆ.ಕಣಿವೆಯ ಅಂಕುಡೊಂಕಾದ ರಸ್ತೆಯಲ್ಲಿ ಹಿಂದಿನಿಂದ ಬರುತ್ತಿದ್ದ ಟ್ರಕ್ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಮದುವೆ ಸಮಾರಂಭಕ್ಕೆ ತಲುಪುವ ಮುನ್ನವೇ ಇಡೀ ಕುಟುಂಬವು ದುರಂತ ಅಂತ್ಯ ಕಂಡಿದೆ. ಅಲ್ಲದೆ, ಘಟನೆಯಲ್ಲಿ ಕಾರು ಚಾಲಕನೂ ಸಹ ಸ್ಥಳದಲ್ಲೇ ಅಸುನೀಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಶಿವ ಕುಮಾರ್ ಭೂಯಾನ್, ಪತ್ನಿ ರೂಬಿ ಕುಮಾರಿ, ಇಬ್ಬರು ಹೆಣ್ಣುಮಕ್ಕಳಾದ ಸೋನಿ ಕುಮಾರಿ ಮತ್ತು ಸುಹಾನಿ ಕುಮಾರಿ ಹಾಗೂ ಅವರ ಮಾವ ಮತ್ತು ಚಾಲಕ ಸೇರಿದ್ದಾರೆ. ಎಲ್ಲರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಘಟನೆಯ ಹಿನ್ನೆಲೆಯಲ್ಲಿ, ಮೃತರ ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿದ್ದಾರೆ. ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಸ್ಥಳೀಯರು ಹಾಗೂ ಪೊಲೀಸರು ಹರಸಾಹಸಪಟ್ಟರು.
ಮೂವರು ಸ್ನೇಹಿತರ ದುರ್ಮರಣ: ರಾಜಸ್ಥಾನದ ಜುಂಝುನು ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಅಸುನೀಗಿದ್ದಾರೆ. ಜುಂಝುನು-ಮಂಡ್ರೇಲಾ ರಸ್ತೆಯ ಇಸಾರ್ಪುರ ಬಳಿ, ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ದುರಂತ ಅಪಘಾತದಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿ, ಚಾಲಕ ಗಂಭೀರ ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ಜುಂಝುನು ನಗರದ ನಿವಾಸಿಗಳಾದ ನಾಲ್ವರು ಸ್ನೇಹಿತರು ಸೋನಾಸರ್‌ನಲ್ಲಿ ನಡೆದ ಭಕ್ತಿ ಸಂಗೀತ ಸಂಜೆ ಕಾರ್ಯಕ್ರಮ ಮುಗಿಸಿ, ಬೆಳಗಿನ ಜಾವ 1:30ರ ಸುಮಾರಿಗೆ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ, ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಪ್ರಾಣಿಯೊಂದು ಕಾಣಿಸಿಕೊಂಡಿದ್ದು, ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಕಾರು ನಿಯಂತ್ರಣ ತಪ್ಪಿದೆ. ಬಳಿಕ ರಸ್ತೆಬದಿಯಲ್ಲಿ ಹಲವು ಬಾರಿ ಉರುಳಿ ಬಿದ್ದು ಜಖಂಗೊಂಡಿದೆ.
