ಉದಯವಾಹಿನಿ, ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಉದ್ವಿಗ್ನತೆಯನ್ನು ತಣಿಸಲು ಪಾಕಿಸ್ತಾನದ ಇಸ್ಲಮಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆಗಳು ಹಳಿತಪ್ಪುವ ಲಕ್ಷಣಗಳು ಕಾಣಿಸುತ್ತಿವೆ.
ಅಮೆರಿಕದ ನಿಯೋಗದೊಂದಿಗೆ ನೇರ ಮಾತುಕತೆ ನಡೆಸಲು ಇರಾನ್ ಸಿದ್ಧವಿಲ್ಲ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಪ್ರಖ್ಯಾತ ಮಾಧ್ಯಮ ಸಂಸ್ಥೆ ‘ಎಆರ್‌ವೈ ನ್ಯೂಸ್’ ಅಧ್ಯಕ್ಷ ಕಮ್ರಾನ್ ಖಾನ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ವಾಷಿಂಗ್ಟನ್‌ನಿಂದ ತಡರಾತ್ರಿ ಆಗಮಿಸಲಿರುವ ಅಮೆರಿಕದ ನಿಯೋಗವನ್ನು ಭೇಟಿ ಮಾಡಲು ಟೆಹ್ರಾನ್ ಇಚ್ಛಿಸುತ್ತಿಲ್ಲ. ಇದರಿಂದಾಗಿ ಇಂದು ನಡೆಯಬೇಕಿದ್ದ ನಿರ್ಣಾಯಕ ಸಭೆಯ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ.
ಮಾತುಕತೆಗೆ ಇಳಿಯುವ ಮುನ್ನ ಇರಾನ್ ಒಂದು ಪ್ರಮುಖ ಷರತ್ತನ್ನು ವಿಧಿಸಿದೆ. ಅಮೆರಿಕದ ನೌಕಾಪಡೆಯು ಹಾರ್ಮುಜ್ ಜಲಸಂಧಿಯ ಮೇಲೆ ಹೇರಿರುವ ದಿಗ್ವಂಧನವನ್ನು ಮೊದಲು ತೆರವುಗೊಳಿಸಬೇಕು ಎಂದು ಇರಾನ್ ಪಟ್ಟು ಹಿಡಿದಿದೆ. ಈ ದಿಬ್ಬಂಧನ ಮುಕ್ತಾಯವಾಗದ ಹೊರತು ಯಾವುದೇ ನೇರ ಮಾತುಕತೆ ನಡೆಸುವುದಿಲ್ಲ ಎಂದು ಇರಾನ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನದ ಪ್ರಧಾನ ಮಂತ್ರಿ ಕಾರ್ಯಾಲಯ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಇರಾನ್ ವಿದೇಶಾಂಗ ಸಚಿವರು ಮತ್ತು ಅವರ ನಿಯೋಗವು ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾಗಿರುವುದನ್ನು ಕಾಣಬಹುದು. ಈ ಸಭೆಯಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತು ಉಪ ಪ್ರಧಾನಿ ಇಶಾಕ್ ದಾರ್ ಕೂಡ ಭಾಗವಹಿಸಿದ್ದರು. ಆದರೆ, ಈ ಸಭೆಯ ನಂತರವೂ ಅಮೆರಿಕ ಮತ್ತು ಇರಾನ್ ನಡುವೆ ನೇರ ಸಂವಾದ ಏರ್ಪಡುವ ಸಾಧ್ಯತೆಗಳು ಕ್ಷೀಣಿಸಿವೆ. ಒಟ್ಟಾರೆಯಾಗಿ, ಪಾಕಿಸ್ತಾನವು ಎರಡೂ ರಾಷ್ಟ್ರಗಳ ನಡುವೆ ಸೇತುವೆಯಾಗಲು ಪ್ರಯತ್ನಿಸುತ್ತಿದ್ದರೂ, ಇರಾನ್‌ನ ಕಠಿಣ ನಿಲುವು ಶಾಂತಿ ಪ್ರಕ್ರಿಯೆಗೆ ಅಡ್ಡಿಯಾಗಿ ಪರಿಣಮಿಸಿದೆ.

Leave a Reply

Your email address will not be published. Required fields are marked *

error: Content is protected !!