ಉದಯವಾಹಿನಿ, ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸಂಚಲನ ಮೂಡಿಸಿದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಇದೀಗ ಗಡಿಯಾಚೆ ಚರ್ಚೆಗೆ ಕಾರಣವಾಗಿದೆ. ಚಿತ್ರದಲ್ಲಿ ಪಾಕಿಸ್ತಾನದ ಲಿಯಾರಿ ಪ್ರದೇಶವನ್ನು ಬಿಂಬಿಸಿದ ರೀತಿಗೆ ಆಕ್ಷೇಪ ವ್ಯಕ್ತವಾಗಿದ್ದು, ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ತನ್ನದೇ ಕಥೆಯನ್ನು ಹೇಳಲು ‘ಮೇರಾ ಲಿಯಾರಿ’ ಎಂಬ ಹೊಸ ಚಿತ್ರವನ್ನು ತೆರೆಗೆ ತರಲು ಸಜ್ಜಾಗಿದೆ.
ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ನಲ್ಲಿ ರಣವೀರ್ ಸಿಂಗ್ ಗೂಢಚರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಲಿಯಾರಿ ಪ್ರದೇಶದ ಗ್ಯಾಂಗ್ ಸಂಘರ್ಷ, ಅಂಡರ್‌ವರ್ಡ್ ಚಟುವಟಿಕೆಗಳು ಮತ್ತು ಉಗ್ರರ ಜಾಲದ ವಿರುದ್ಧದ ಕಾರ್ಯಾಚರಣೆಯನ್ನು ಕಥೆಯ ಕೇಂದ್ರಬಿಂದುವಾಗಿಸಲಾಗಿದೆ. ನೈಜ ಘಟನೆಗಳಿಂದ ಪ್ರೇರಿತವಾಗಿರುವ ಈ ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಕಲೆಕ್ಷನ್‌ನಲ್ಲೂ ದಾಖಲೆ ನಿರ್ಮಿಸಿದೆ.
