ಉದಯವಾಹಿನಿ, ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ಆವರಣದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಪೀಠದ ಟ್ರಸ್ಟ್‌ನ ಪ್ರಧಾನ ಧರ್ಮಧರ್ಶಿ ಬಿ.ಸಿ ಉಮಾಪತಿ ಲೆಕ್ಕ ಮಂಡನೆ ಸಂದರ್ಭದಲ್ಲಿ ಭಾರೀ ಗಲಾಟೆಯಾಗಿದೆ.
ಸ್ವಾಮೀಜಿ ಬೆಂಬಲಿಗರಿಗೆ ಟ್ರಸ್ಟಿನ ಬೆಂಬಲಿಗರು ನಿಂದಿಸಿದ್ದಾರೆ. ಈ ವೇಳೆ ಸ್ವಾಮೀಜಿ ಬೆಂಬಲಿಗರು ಟ್ರಸ್ಟ್ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಲೆಕ್ಕ ಕೇಳೋರು ಇಷ್ಟು ದಿನ ಎಲ್ಲಿ ಹೋಗಿದ್ರಿ ಎಂದು ಟ್ರಸ್ಟ್ ಬೆಂಬಲಿಗರು ನಿಂದಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ವಾಮೀಜಿ ಬೆಂಬಲಿಗರು ವಿಜಯನಗರ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಶಿವನಗೌಡ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಗಲಾಟೆ, ಧಿಕ್ಕಾರ ಘೋಷಣೆ ಮಧ್ಯೆ ಪ್ರಧಾನ ಧರ್ಮದರ್ಶಿ ಉಮಾಪತಿ ಲೆಕ್ಕ ಕೊಟ್ಟಿದ್ದಾರೆ. 2008 ರಿಂದ 2026ರವರೆಗಿನ ಲೆಕ್ಕಾಚಾರವನ್ನು ತೆರೆದಿಟ್ಟಿದ್ದಾರೆ. ಪೀಠದ ಟ್ರಸ್ಟ್ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಭಕ್ತರು ನೀಡಿದ ಕಾಣಿಕೆ, ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ನೀಡಿದರು. ಕಳೆದ 2008 ರಿಂದ 2026ರವರೆಗೆ 27 ಕೋಟಿ 61 ಲಕ್ಷ 51 ಸಾವಿರದ 518 ರೂ. ಜಮಾ ಆಗಿದೆ. ಸರ್ಕಾರದ ಅನುದಾನ ಸೇರಿ 27 ಕೋಟಿ 61 ಲಕ್ಷ ರೂ. ಅನುದಾನ ಜಮಾ ಆಗಿದೆ ಎಂದು ಮಾಹಿತಿ ನೀಡಿದರು.
