ಉದಯವಾಹಿನಿ, ಬಾರ್ಮರ್(ರಾಜಸ್ಥಾನ): ಇದು ಬೇಸಿಗೆ. ವಿದ್ಯುತ್ ಕಡಿತ ಅಥವಾ ಲೋಡ್ ಶೆಡ್ಡಿಂಗ್ ದೇಶದ ಅಲ್ಲಲ್ಲಿ ಕೇಳಿ ಬರಲಾರಂಭಿಸಿದೆ. ಅದೇ ರೀತಿ, ರಾಜಸ್ಥಾನದ ಒಣ ಮರುಭೂಮಿಗಳಲ್ಲಿ ವಿದ್ಯುತ್ ವ್ಯತ್ಯಯ ಎಂಬುದು ಸರ್ವೇ ಸಾಮಾನ್ಯ ಸಂಗತಿ. ಇಲ್ಲಿನ ಜನರು ಈ ಸಮಸ್ಯೆಯೊಂದಿಗೆ ಪ್ರತಿದಿನವೂ ಬದುಕುತ್ತಿದ್ದಾರೆ, ಹೋರಾಡುತ್ತಾರೆ.ಈ ಸಮಸ್ಯೆಗೆ ಹೇಗಾದರೂ ಪರಿಹಾರ ಕಂಡುಹಿಡಿಯಲೇ ಬೇಕೆಂದು ಛಲದಿಂದ ಹೊರಟ ಯುವಕನೇ ಡುಂಗಾರ್ ಸಿಂಗ್ ಸೋಧಾ. ಈತ ಬಾರ್ಮರ್ ಜಿಲ್ಲೆಯ ಸಂಖಾಲಿ ಗ್ರಾಮದ ನಿವಾಸಿ.
ಯುವ ನಾವೀನ್ಯಕಾರ ಕಂಡುಹಿಡಿದ ‘ಪೋರ್ಟಬಲ್ ವಿಂಡ್ ಟರ್ಬೈನ್’ ಇದೀಗ ಭಾರತ ಮಾತ್ರವಲ್ಲ, ಜಗತ್ತಿನ 50ಕ್ಕೂ ಹೆಚ್ಚು ದೇಶಗಳಲ್ಲಿ ಮನೆ ಮಾತಾಗಿದೆ. ಅಲ್ಲಿನ ಮನೆ, ತೋಟ ಮತ್ತು ಸಂಸ್ಥೆಗಳನ್ನು ಇದೇ ಪೋರ್ಟಬಲ್ ವಿಂಡ್ ಟರ್ಬೈನ್ ಬೆಳಗಿಸುತ್ತಿದೆ.
ಐಡಿಯಾ ಹೊಳೆದ ಬಗೆ: ಇದನ್ನು ಕಂಡು ಹಿಡಿಯಲು ಕಾರಣವಾಗಿದ್ದು 2006ರ ವಿನಾಶಕಾರಿ ಪ್ರವಾಹ. ಈ ಸಮಯದಲ್ಲಿ ತಮ್ಮ ತಾಯಿಯ ಕುಟುಂಬದವರು ನೆಲೆಸಿದ್ದ ಸ್ಥಳದಲ್ಲಿ ದೊಡ್ಡ ವಿಂಡ್‌ಮಿಲ್‌ಗಳನ್ನು ಸ್ಥಾಪಿಸುವುದನ್ನು ನೋಡಿದ್ದಾರೆ. ಮರುಭೂಮಿ ರಾಜ್ಯದ ಹಲವು ಪ್ರದೇಶಗಳಲ್ಲಿ ಜನರು ದಿನಗಟ್ಟಲೆ ವಿದ್ಯುತ್ ಇಲ್ಲದೆ ಪರದಾಡುವುದನ್ನು ಕಣ್ಣಾರೆ ಕಂಡಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರವಾಗಿ ಶುದ್ಧ ಇಂಧನವನ್ನು ಸಾಮಾನ್ಯ ಮನೆಗಳಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಏಕೆ ನೀಡಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಸಿಂಗ್ ಮನಸ್ಸಿನಲ್ಲಿ ಹುಟ್ಟಿಕೊಂಡಿದೆ.ಸಿಂಗ್ ಅವರಿಗಿದ್ದ ಸೀಮಿತ ಶಿಕ್ಷಣದ ಹೊರತಾಗಿಯೂ ಆಳವಾದ ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಯೂಟ್ಯೂಬ್ ಟ್ಯುಟೋರಿಯಲ್‌ಗಳು, ಶೈಕ್ಷಣಿಕ ಪತ್ರಿಕೆಗಳು ಮತ್ತು ವಿಶ್ವವಿದ್ಯಾಲಯಗಳಿಂದ ತಾಂತ್ರಿಕ ಸಂಪನ್ಮೂಲಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿದರು. ರಾಜಸ್ಥಾನದಂತಹ ಕಡಿಮೆ ಗಾಳಿಯ ಸಂಚಾರ ಇರುವ ಪ್ರದೇಶಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಾಂದ್ರೀಕೃತ, ಪೋರ್ಟಬಲ್ ವಿಂಡ್ ಟರ್ಬೈನ್ ಅನ್ನು ಅಂತಿಮವಾಗಿ ರೂಪಿಸಿದರು. ಇದಕ್ಕೆ ಸಿಂಗ್ ಹಲವು ವರ್ಷಗಳ ಕಾಲ ಪರಿಶ್ರಮಪಡಬೇಕಾಯಿತು.
