ಉದಯವಾಹಿನಿ, ಸೂರತ್(ಗುಜರಾತ್​): ಕೌಟುಂಬಿಕ ಕಲಹದ ಕಾರಣಕ್ಕಾಗಿ ಪತ್ನಿಯನ್ನು ಕೊಂದ ಪತಿ, ಆಕೆಯ ಮೃತದೇಹವನ್ನು ಕಟ್ಟಿಗೆಯ ಪೆಟ್ಟಿಗೆಯಲ್ಲಿ ತುಂಬಿ, ದುರ್ವಾಸನೆ ಬೀರದಂತೆ ಅದಕ್ಕೆ ಸಿಮೆಂಟ್​ ಮೆತ್ತಿದ ಆಘಾತಕಾರಿ ಮತ್ತು ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಸೂರತ್​​ನ ಸಲಾಬತ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪತ್ನಿಯನ್ನು ತಾನೇ ಕೊಂದ ಬಳಿಕ, ಆಕೆ ನಾಪತ್ತೆಯಾಗಿದ್ದಾಳೆ ಎಂದು ಸುದ್ದಿ ಹಬ್ಬಿಸಿ ಈ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದ. ಆದರೆ, ಪೊಲೀಸರ ತನಿಖೆಯಲ್ಲಿ ನಿಜಬಣ್ಣ ಬಯಲಾಗಿದೆ.
ಐದು ದಿನ ಮನೆಯಲ್ಲಿತ್ತು ಶವ: ಪ್ರಕರಣದ ಮಾಹಿತಿ ಹಂಚಿಕೊಂಡಿರುವ ಪೊಲೀಸರು, ಕಣ್ಮರೆಯಾಗಿರುವ ಆರೋಪಿ ವಿಶಾಲ್​ ಸಾಲ್ವಿ ಏಪ್ರಿಲ್​ 20ರಂದು ತಮ್ಮ ಪತ್ನಿ ಶಿಲ್ಪಾ ಎಂಬಾಕೆಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಶವವನ್ನು ಕಟ್ಟಿಗೆಯ ಪೆಟ್ಟಿಗೆಯಲ್ಲಿ ತುಂಬಿದ್ದಾನೆ. ಕೊಲೆ ಮಾಡಿದ್ದು ಯಾರಿಗೂ ತಿಳಿಯದಂತೆ ನೋಡಿಕೊಳ್ಳಲು ಆ ಪೆಟ್ಟಿಗೆಗೆ ಸಿಮೆಂಟ್​​ ಮೆತ್ತಿ ಅದನ್ನು ಮನೆಯ ಛಾವಣಿಯಲ್ಲಿ ಇಟ್ಟಿದ್ದಾನೆ.

ಇತ್ತ, ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಕಟ್ಟುಕಥೆಯನ್ನು ಸೃಷ್ಟಿಸಿ ಮಹಿಳೆಯ ಪೋಷಕರಿಗೆ ಮಾಹಿತಿ ನೀಡಿದ್ದಾನೆ. ಆಕೆಯ ತಂದೆ ಸೂರತ್​​ಗೆ ಆಗಮಿಸಿದಾಗ, ಅವರ ಜೊತೆಗೂಡಿ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ಕೂಡ ದಾಖಲಿಸಿದ್ದಾನೆ. ಮಗನ ಮುಂದೆ ತಪ್ಪೊಪ್ಪಿಕೊಂಡ ತಂದೆ: ಐದು ದಿನಗಳಾದರೂ ಮಹಿಳೆ ಸಿಗದಿದ್ದಾಗ, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ತನ್ನನ್ನೂ ಸೇರಿದಂತೆ ಎಲ್ಲೆಡೆ ಶೋಧ ನಡೆಸಿದಾಗ ಆರೋಪಿ ಭಯಭೀತಗೊಂಡಿರುವ ಸಾಧ್ಯತೆ ಇದೆ. ಹೀಗಾಗಿ, ಏಪ್ರಿಲ್​ 25ರಂದು 13 ವರ್ಷದ ಮಗನಿಗೆ ಪತ್ರವೊಂದನ್ನು ನೀಡಿ, ಬಳಿಕ ಆತ ಕಣ್ಮರೆಯಾಗಿದ್ದಾನೆ. ಪುತ್ರ ಆ ಪತ್ರವನ್ನು ಮನೆಯವರಿಗೆ ನೀಡಿದಾಗ, ಮಹಿಳೆಯ ಶವ ಮತ್ತು ಆರೋಪಿಯ ರಹಸ್ಯ ಬಯಲಾಗಿದೆ. ಆರೋಪಿ ತಾನೇ ಬರೆದಿರುವ ಪತ್ರದಲ್ಲಿ, “ನಾನು ಅಪರಾಧ ಮಾಡಿದ್ದೇನೆ. ಅದಕ್ಕೆ ನಾನೇ ಜವಾಬ್ದಾರನಾಗಿರುತ್ತೇನೆ” ಎಂದು ಅದರಲ್ಲಿ ನಮೂದಿಸಿ, ಕೊಲೆ ನಡೆದ ದಿನಾಂಕ ಮತ್ತು ಶವ ಮರೆಮಾಚಿಟ್ಟ ಸ್ಥಳದ ಬಗ್ಗೆಯೂ ಅದರಲ್ಲಿ ತಿಳಿಸಿದ್ದಾನೆ. ಪತ್ರದಲ್ಲಿರುವ ಮಾಹಿತಿಯಂತೆ ಪೊಲೀಸರು ಸಿಮೆಂಟ್ ಮೆತ್ತಿದ ಪೆಟ್ಟಿಗೆಯನ್ನು ಭೇದಿಸಿದಾಗ, ಅದರಲ್ಲಿ ಮಹಿಳೆಯ ಕೊಳೆತ ದೇಹ ಸಿಕ್ಕಿದೆ. ಪೊಲೀಸರು ಪತ್ರ ಮತ್ತು ಶವವನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!