ಉದಯವಾಹಿನಿ, ರಾಂಚಿ (ಜಾರ್ಖಂಡ್​): ರಾಂಚಿ ಜಿಲ್ಲೆಯ ಹಾತಿಯಾ ರೈಲು ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆಯು ಮೂವರು ಬಾಲಕರನ್ನು ರಕ್ಷಿಸಿದೆ. ಈ ಬಾಲಕರನ್ನು ಜಾರ್ಖಂಡ್​ನಿಂದ ಬೆಂಗಳೂರಿಗೆ ಮಾನವ ಕಳ್ಳಸಾಗಣೆ ಮೂಲಕ ಕರೆದೊಯ್ಯಲಾಗುತ್ತಿತ್ತು ಎಂದು ಆರ್​ಪಿಎಫ್​ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.ಬಾಲಕರನ್ನು ಕರೆದೊಯ್ಯುತ್ತಿದ್ದ 27 ವರ್ಷ ವಯಸ್ಸಿನ ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದು, ಆತ ಮಾನವ ಕಳ್ಳಸಾಗಣೆ ಮಾಡುವ ಜಾಲದೊಂದಿಗೆ ಸಂಪರ್ಕ ಹೊಂದಿರುವ ಆರೋಪ ಕೇಳಿಬಂದಿದೆ ಎಂದು ಆರ್​ಪಿಎಫ್​ ಹೇಳಿದೆ. ಮಾನವ ಕಳ್ಳಸಾಗಣೆ ಮತ್ತು ಬಾಲ ಕಾರ್ಮಿಕ ಪದ್ಧತಿ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ರೈಲ್ವೆ ಪೊಲೀಸ್​ ಫೋರ್ಸ್​, ಮೂವರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ರಕ್ಷಿಸಲ್ಪಟ್ಟಿರುವ ಬಾಲಕರು 14 ರಿಂದ 15 ವರ್ಷ ವಯಸ್ಸಿನವರೆಂದು ತಿಳಿಸಲಾಗಿದೆ. ಇವರನ್ನು ನಿನ್ನೆ ಹಾತಿಯಾ ರೈಲು ನಿಲ್ದಾಣದಲ್ಲಿ ರಕ್ಷಿಸಿರುವ ಬಗ್ಗೆ ಆರ್​ಪಿಎಫ್​ ಮಾಹಿತಿ ನೀಡಿದೆ.
ವಿಚಾರಣೆ ವೇಳೆ ಈ ಕುರಿತು ಬಾಯ್ಬಿಟ್ಟಿರುವ ಬಂಧಿತ ಆರೋಪಿ, ಬೆಂಗಳೂರಿನಲ್ಲಿ ಕಟ್ಟಡ ಕೆಲಸಗಳಿಗೆ ಕಾರ್ಮಿಕರಾಗಿ ದುಡಿಯಲು ಬಡ ಮಕ್ಕಳನ್ನು ಗುರಿಯಾಗಿಸಿಕೊಂಡು ಕಳ್ಳಸಾಗಣೆ ಮೂಲಕ ಕಳುಹಿಸಲಾಗುತ್ತಿತ್ತು ಎಂದು ತಿಳಿಸಿದ್ದಾನೆ. ಅಲ್ಲದೆ, ಇದಕ್ಕಾಗಿ ಆತನಿಗೆ ಕಾರ್ಮಿಕರನ್ನು ಕಳಿಸಿದ್ದಕ್ಕಾಗಿ ಒಬ್ಬರಿಂದ 300 ರಿಂದ 400 ರೂಪಾಯಿ ಕಮಿಷನ್​ ಸಿಗುತ್ತಿತ್ತು ಎಂಬುದನ್ನು ಪೊಲೀಸರ ಎದುರು ಆರೋಪಿ ಬಾಯ್ಬಿಟ್ಟಿದ್ದಾನೆ.
ರಕ್ಷಿಸಲ್ಪಟ್ಟಿರುವ ಬಾಲಕರು ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಝಾಲ್ದಾದವರು ಎಂದು ಆರ್​ಪಿಎಫ್​ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಲ್ಲಿ ತಮಗೆ ನೌಕರಿ ಕೊಡಿಸುವುದಾಗಿ ನಂಬಿಸಿ ಮೋಸದಿಂದ ಬೆಂಗಳೂರಿಗೆ ಆ ವ್ಯಕ್ತಿ ತಮ್ಮನ್ನು ಕರೆದೊಯ್ಯುತ್ತಿದ್ದ ಎಂದು ಸಂತ್ರಸ್ತ ಬಾಲಕರು ಪೊಲೀಸರಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!