ಉದಯವಾಹಿನಿ, ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಹೊಸ ಎಚ್ಚರಿಕೆ ನೀಡಿದ್ದು, ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ಮೂರು ದಿನಗಳ ಕಾಲಾವಕಾಶ ನೀಡಿದ್ದಾರೆ.ಫಾಕ್ಸ್ ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರು, ಒಂದು ವೇಳೆ ಇರಾನ್ ತೈಲ ರಫ್ತು ಮಾಡಲು ಸಾಧ್ಯವಾಗದಿದ್ದರೆ, ತೈಲ ಸಂಗ್ರಹಣಾ ಸಾಮರ್ಥ್ಯ ಮೀರಿ ಪೈಪ್‌ಲೈನ್‌ಗಳ ಒಳಗೆ ಒತ್ತಡ ಹೆಚ್ಚಾಗಲಿದೆ. ಇದರಿಂದಾಗಿ ಪೈಪ್‌ಲೈನ್‌ಗಳು “ಒಳಗಿನಿಂದಲೇ ಸ್ಫೋಟಗೊಳ್ಳಲಿವೆ” ಎಂದು ಅವರು ಎಚ್ಚರಿಸಿದ್ದಾರೆ.ಅಮೆರಿಕದ ನೌಕಾಪಡೆಯು ಇರಾನ್‌ನ ಬಂದರುಗಳನ್ನು ಸಂಪೂರ್ಣವಾಗಿ ದಿಗ್ಬಂಧನ ಮಾಡಿದ್ದರಿಂದ ಇರಾನ್‌ಗೆ ತನ್ನ ತೈಲವನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ತೈಲ ಹರಿವು ನಿಂತರೆ, ಪೈಪ್‌ಲೈನ್‌ಗಳಲ್ಲಿ ಅತಿಯಾದ ಒತ್ತಡ ಉಂಟಾಗಿ ಅವು ಯಾಂತ್ರಿಕವಾಗಿ ಮತ್ತು ತಾಂತ್ರಿಕವಾಗಿ ಹಾನಿಗೊಳಗಾಗುತ್ತವೆ ಎಂದು ಟ್ರಂಪ್ ಹೇಳಿದ್ದಾರೆ.
ಈ ರೀತಿ ಪೈಪ್‌ಲೈನ್‌ಗಳು ಸ್ಫೋಟಗೊಂಡರೆ ಅಥವಾ ಹಾನಿಗೊಳಗಾದರೆ ಅದನ್ನು ಮೊದಲಿನ ಸ್ಥಿತಿಗೆ ತರಲು ಸಾಧ್ಯವಿಲ್ಲ. ಇರಾನ್ ತನ್ನ ಒಟ್ಟು ತೈಲ ಉತ್ಪಾದನಾ ಸಾಮರ್ಥ್ಯದ ಶೇ. 50 ರಷ್ಟು ಭಾಗವನ್ನು ಶಾಶ್ವತವಾಗಿ ಕಳೆದುಕೊಳ್ಳಬಹುದು ಎಂದು ತಿಳಿಸಿದರು.
ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಪಾಕಿಸ್ತಾನದ ಮೂಲಕ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಅಮೆರಿಕ ತನ್ನ ಆರ್ಥಿಕ ದಿಗ್ಬಂಧನವನ್ನು ಹಿಂತೆಗೆದುಕೊಂಡರೆ, ಜಾಗತಿಕ ತೈಲ ಸಾಗಣೆಗೆ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದಾಗಿ ಇರಾನ್ ಹೇಳಿದೆ. ಟ್ರಂಪ್ ಅವರು ಅಮೆರಿಕದ ನಿಯಮಗಳಿಗೆ ಒಪ್ಪದಿದ್ದರೆ ಈ ಯಾವುದೇ ಪ್ರಸ್ತಾವನೆಗಳು ಕೆಲಸ ಮಾಡುವುದಿಲ್ಲ ಎಂಬ ಕಠಿಣ ನಿಲುವು ಹೊಂದಿದ್ದಾರೆ. ಇರಾನ್ ತನ್ನ ದೇಶದಲ್ಲಿ ನಡೆಸುತ್ತಿರುವ ಯುರೇನಿಯಂ ಪುಷ್ಟೀಕರಣ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇರಾನ್ ಬಳಿ ಇರುವ ಸುಮಾರು 440 ಕೆಜಿಗಿಂತ ಹೆಚ್ಚು ಪ್ರಮಾಣದ ಶೇ. 60 ರಷ್ಟು ಪುಷ್ಟೀಕರಿಸಿದ ಯುರೇನಿಯಂ ದಾಸ್ತಾನನ್ನು ಸಂಪೂರ್ಣವಾಗಿ ಅಮೆರಿಕಕ್ಕೆ ಅಥವಾ ಯಾವುದಾದರೂ ಮೂರನೇ ದೇಶಕ್ಕೆ ಹಸ್ತಾಂತರಿಸಬೇಕು ಎಂಬ ಬೇಡಿಕೆಯನ್ನು ಅಮೆರಿಕ ಇರಿಸಿದೆ.
