ಉದಯವಾಹಿನಿ, ಬಾಲಿವುಡ್ ನಟ ಆಮಿರ್ ಖಾನ್ ಅವರು ತಮ್ಮ ಮಗ ಜುನೈದ್ ಖಾನ್ ವೃತ್ತಿಜೀವನದ ಬಗ್ಗೆ ಬಹಳ ಕಾಳಜಿ ಮತ್ತು ಹೆಮ್ಮೆ ಹೊಂದಿದ್ದಾರೆ. ಇತ್ತೀಚೆಗೆ ಜುನೈದ್ ನಟನೆಯ ‘ಏಕ್ ದಿನ್’ ಚಿತ್ರದ ಪ್ರಚಾರಕ್ಕಾಗಿ ಆಯೋಜಿಸಲಾಗಿದ್ದ ‘ಏಕ್ ದಿನ್ ಕಿ ಮೆಹ್ಫಿಲ್’ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಅವರು ಎಲ್ಲರ ಎದುರು ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಆಮಿರ್ ಖಾನ್ ಅವರು ಸಿನಿಮಾದ ತುಣುಕೊಂದನ್ನು ನೋಡುತ್ತಾ ಭಾವುಕರಾಗಿರುವುದು ಕಂಡುಬಂದಿದೆ. ಅಳು ತಡೆಯಲಾಗದೆ ತಮ್ಮ ಶರ್ಟ್‌ನಿಂದಲೇ ಕಣ್ಣೀರನ್ನು ಒರೆಸಿಕೊಂಡಿದ್ದಾರೆ. ಈ ವೇಳೆ ಪಕ್ಕದಲ್ಲೇ ಕುಳಿತಿದ್ದ ನಟಿ ಸಾಯಿ ಪಲ್ಲವಿ ಮತ್ತು ಮಗ ಜುನೈದ್ ಅವರು ಆಮಿರ್ ಅವರನ್ನು ಸಮಾಧಾನಪಡಿಸಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಸಾಯಿ ಪಲ್ಲವಿ ಅವರ ಅಭಿನಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಆಮಿರ್, ‘ಸಾಯಿ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಅವರ ನಟನೆ ನೋಡಿ ನೀವು ಬೆರಗಾಗುತ್ತೀರಿ. ನನ್ನ ಪ್ರಕಾರ, ಇಂದು ನಮ್ಮ ದೇಶದಲ್ಲಿರುವ ಅತ್ಯುತ್ತಮ ನಟಿಯರಲ್ಲಿ ಸಾಯಿ ಪಲ್ಲವಿ ಅಗ್ರಸ್ಥಾನದಲ್ಲಿದ್ದಾರೆ’ ಎಂದು ಹೊಗಳಿದರು. ಆಮಿರ್ ಹೇಳಿದ ಈ ಮಾತು ಕೇಳಿ ಸಾಯಿ ಪಲ್ಲವಿ ಮುಗುಳ್ನಗುತ್ತಾ ಧನ್ಯವಾದ ಅರ್ಪಿಸಿದರು.
ಮಗ ಜುನೈದ್ ಖಾನ್ ಅಭಿನಯದ ಬಗ್ಗೆ ಮಾತನಾಡಿದ ಆಮಿರ್, ‘ಜುನೈದ್ ಕೂಡ ಪರವಾಗಿಲ್ಲ ಎಂಬಂತೆ ನಟಿಸಿದ್ದಾನೆ. ಅವನು ನನ್ನ ಮಗನಾದ್ದರಿಂದ ನಾನು ಹೆಚ್ಚು ಹೊಗಳಲು ಸಾಧ್ಯವಿಲ್ಲ. ಆದರೆ ಚಿತ್ರದ ಎಲ್ಲಾ ಕಲಾವಿದರು ಅದ್ಭುತವಾಗಿ ಕೆಲಸ ಮಾಡಿದ್ದಾರೆ’ ಎಂದು ತಮಾಷೆಯಾಗಿ ಹೇಳಿದರು. ಅಲ್ಲದೆ, ಚಿತ್ರದ ಶೀರ್ಷಿಕೆ ಗೀತೆಯನ್ನು ಆಮಿರ್ ವೇದಿಕೆಯ ಮೇಲೆ ಹಾಡಿ ರಂಜಿಸಿದರು.
