ಉದಯವಾಹಿನಿ , ಜಬಲ್ಪುರ(ಮಧ್ಯಪ್ರದೇಶ): ಇಲ್ಲಿನ ಬಾರ್ಗಿ ಅಣೆಕಟ್ಟಿನ ಹಿನ್ನೀರಿನಲ್ಲಿ ನಿನ್ನೆ ಸಂಭವಿಸಿದ ಕ್ರೂಸ್ ಬೋಟ್ (ಪ್ರವಾಸಿ ಬೋಟ್) ಅಪಘಾತದ ನಂತರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದೀಗ ದುರಂತದ ಹೃದಯವಿದ್ರಾವಕ ದೃಶ್ಯಗಳು ಹೊರಬರುತ್ತಿವೆ.
ಆಗ್ರಾದಿಂದ ಕರೆಸಲಾದ ವಿಶೇಷ ಡೈವಿಂಗ್ ತಂಡ ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಭಯಾನಕ ದೃಶ್ಯಗಳನ್ನು ಕಂಡಿದೆ. ಮುಳುಗಿದ ಬೋಟ್‌ನ ಅವಶೇಷಗಳ ನಡುವೆ ತನ್ನ ನಾಲ್ಕು ವರ್ಷದ ಮಗನನ್ನು ಲೈಫ್ ಜಾಕೆಟ್‌ನಲ್ಲೇ ಎದೆಗೆ ಬಿಗಿದುಕೊಂಡಿದ್ದ ತಾಯಿಯ ಮೃತದೇಹ ಸಿಕ್ಕಿದೆ. ತಾಯಿಯ ಹಿಡಿತ ಎಷ್ಟು ಬಲವಾಗಿತ್ತೆಂದರೆ ಸಾವಿಗೂ ಕೂಡಾ ಇಬ್ಬರನ್ನು ಬೇರ್ಪಡಿಸಲು ಸಾಧ್ಯವಾಗಿಲ್ಲ ಎಂಬಂತಿತ್ತು. ಬೆಳಗ್ಗೆ ಬಾರ್ಗಿ ಅಣೆಕಟ್ಟೆಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾಗ ಈ ದೃಶ್ಯ ರಕ್ಷಣಾ ತಂಡದ ಮನ ಕಲಕಿದೆ. ಬೋಟ್‌ನ ಕಿಟಕಿಯ ಬಳಿ ಅವಶೇಷಗಳ ನಡುವೆ ಹೂತುಹೋಗಿದ್ದ ತನ್ನ ಲೈಫ್ ಜಾಕೆಟ್‌ನೊಳಗೆ ತಾಯಿ ತನ್ನ ಮಗುವನ್ನು ಹಿಡಿದುಕೊಂಡಿದ್ದಳು. ಮೃತದೇಹವನ್ನು ರಕ್ಷಣಾ ಸಿಬ್ಬಂದಿ ಹರಸಾಹಸಪಟ್ಟು ಹೊರ ತೆಗೆದರು.
ಅವಘಡದ ನಂತರ ತಾಯಿ ತನ್ನ ಪ್ರೀತಿಯ ಮಗನನ್ನು 12 ಗಂಟೆಗಳ ಕಾಲ ಎದೆಗೆ ಬಿಗಿದುಕೊಂಡಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸಿದ ಆಗ್ರಾದ ಡೈವಿಂಗ್ ತಂಡ, ತಾಯಿ ಮತ್ತು ಮಗನ ಶವಗಳನ್ನು ಕಬ್ಬಿಣದ ಸರಳುಗಳನ್ನು ಬಳಸಿ ಕ್ರೂಸ್ ಬೋಟ್‌ನಿಂದ ಹೊರತೆಗೆದಿರುವುದಾಗಿ ವರದಿಯಾಗಿದೆ.ತಾಯಿ ಮರೀನಾ ಮ್ಯಾಸ್ಸಿ ಮತ್ತು ಅವರ ಪುಟ್ಟ ಮಗ ತ್ರಿಶಾನ್ ಮೃತಪಟ್ಟವರೆಂದು ಗುರುತಿಸಲಾಗಿದೆ. ಮರೀನಾ ಮ್ಯಾಸ್ಸಿ ಅವರ ಪತಿ ಪ್ರದೀಪ್ ಮತ್ತು ಮಗಳು ಸಿಯಾ ಸುರಕ್ಷಿತವಾಗಿದ್ದಾರೆ.
9 ಮಂದಿ ಸಾವು, 28 ಮಂದಿ ರಕ್ಷಣೆ: ಗುರುವಾರ ಸಂಜೆ 5 ಗಂಟೆಯ ಸುಮಾರಿಗೆ ಹಠಾತ್ ಬಿರುಗಾಳಿಯಿಂದಾಗಿ ಜಬಲ್ಪುರದ ಬಾರ್ಗಿ ಅಣೆಕಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಕ್ರೂಸ್ ಬೋಟ್ ಮುಳುಗಿತ್ತು. ಇಲ್ಲಿಯವರೆಗೆ 9 ಶವಗಳನ್ನು ಹೊರತೆಗೆಯಲಾಗಿದ್ದು, 28 ಜನರನ್ನು ರಕ್ಷಿಸಲಾಗಿದೆ.ನಾಲ್ವರು ಇನ್ನೂ ಕಾಣೆಯಾಗಿದ್ದಾರೆ. ಅಪಘಾತದ ಸಮಯದಲ್ಲಿ ಕ್ರೂಸ್ ಬೋಟ್‌ನಲ್ಲಿ 43ರಿಂದ 47 ಪ್ರವಾಸಿಗರಿದ್ದರು ಎಂದು ವರದಿಯಾಗಿದೆ.ಬಾರ್ಗಿ ನಗರದ ಸಿಎಸ್‌ಪಿ ಅಂಜುಲ್ ಮಿಶ್ರಾ ಅವರು ಮಾತನಾಡಿ, “ಆರಂಭಿಕ ರಕ್ಷಣಾ ಸಮಯದಲ್ಲಿ ಎಸ್‌ಡಿಆರ್‌ಎಫ್ ಹಲವು ಜನರನ್ನು ರಕ್ಷಿಸಿತು. ಆದರೆ, ಕತ್ತಲೆ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿ ರಕ್ಷಣಾ ಪ್ರಯತ್ನಗಳಿಗೆ ಅಡ್ಡಿಯಾಯಿತು. ಹೀಗಾಗಿ, ರಕ್ಷಣಾ ಕಾರ್ಯಾಚರಣೆ ಶುಕ್ರವಾರ ಮಧ್ಯಾಹ್ನದವರೆಗೆ ಮುಂದುವರೆದಿದೆ” ಎಂದು ತಿಳಿಸಿದರು.
