ಉದಯವಾಹಿನಿ , ಐಪಿಎಲ್ ಪಂದ್ಯದ ವೇಳೆ ಫಿಲ್ಡಿಂಗ್ ಮಾಡುವಾಗ ನೆಲಕ್ಕೆ ಬಿದ್ದು ಭುಜಕ್ಕೆ ಗಾಯ ಮಾಡಿಕೊಂಡಿದ್ದ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ಐಪಿಎಲ್​ನಿಂದಲೇ ಹೊರಬಿದ್ದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ತವರಿನ ಪಂದ್ಯದಲ್ಲಿ ಬೌಂಡರಿಯ ಬಳಿ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಸ್ಯಾಂಟ್ನರ್ ಅವರ ಭುಜಕ್ಕೆ ಗಾಯವಾಗಿತ್ತು. ಇದೀಗ ಅವರ ಗಾಯದ ಬಗ್ಗೆ ಪ್ರಮುಖ ಮಾಹಿತಿ ಹೊರಬಿದ್ದಿದ್ದು, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯಲ್ಲಿ ಕಳವಳವನ್ನು ಹುಟ್ಟುಹಾಕಿದೆ. ವಾಸ್ತವವಾಗಿ ಸ್ಯಾಂಟ್ನರ್ ಅವರ ಗಾಯವು ತುಂಬಾ ಗಂಭೀರವಾಗಿದ್ದು, ಅವರನ್ನು ಕ್ರಿಕೆಟ್​ನಿಂದ ತಿಂಗಳ ಕಾಲ ದೂರವಿಡಲಿದೆ.

ಮಿಚೆಲ್ ಸ್ಯಾಂಟ್ನರ್​ಗೆ ಗಂಭೀರ ಗಾಯ
ಗಾಯದಿಂದ ಬಳಲುತ್ತಿರುವ ನ್ಯೂಜಿಲೆಂಡ್ ವೈಟ್-ಬಾಲ್ ನಾಯಕ ಮಿಚೆಲ್ ಸ್ಯಾಂಟ್ನರ್ ಕನಿಷ್ಠ ಒಂದು ತಿಂಗಳ ಕಾಲ ಆಟದಿಂದ ಹೊರಗುಳಿಯಲಿದ್ದಾರೆ. ಗ್ರೇಡ್ 3 ಎಸಿಎಲ್ ಭುಜದ ಗಾಯದಿಂದ ಬಳಲುತ್ತಿರುವ ಸ್ಯಾಂಟ್ನರ್, ಈಗಾಗಲೇ ನ್ಯೂಜಿಲೆಂಡ್‌ಗೆ ಮರಳಿದ್ದು, ಸ್ಕ್ಯಾನ್ನಿಂಗ್​ ಒಳಗಾಗಿದ್ದಾರೆ. ಸ್ಕ್ಯಾನ್ನಿಂಗ್ ವರದಿಯ ಪ್ರಕಾರ ಸ್ಯಾಂಟ್ನರ್​ಗೆ ವೈದ್ಯರು ಕನಿಷ್ಠ ಒಂದು ತಿಂಗಳ ವಿಶ್ರಾಂತಿ ಮತ್ತು ರಿಹ್ಯಾಬ್​ಗೆ ಒಳಗಾಗುವಂತೆ ಸೂಚಿಸಿದ್ದಾರೆ, ಇದರಿಂದಾಗಿ ಅವರು ಮುಂಬರುವ ದಿನಗಳಲ್ಲಿ ಹಲವಾರು ಪ್ರಮುಖ ಪಂದ್ಯಗಳಿಂದ ಹೊರಗುಳಿಯಬೇಕಾಗಬಹುದು.

ಸ್ಯಾಂಟ್ನರ್ ಎಷ್ಟು ಪಂದ್ಯಗಳಿಗೆ ಅಲಭ್ಯ?
ಈ ಗಾಯದಿಂದಾಗಿ ಸ್ಯಾಂಟ್ನರ್ ಮೇ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಮತ್ತು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯಗಳಿಗೆ ಅವರ ಲಭ್ಯತೆಯನ್ನು ನಂತರ ನಿರ್ಧರಿಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ಸ್ಯಾಂಟ್ನರ್ ಫಿಟ್ ಆಗದಿದ್ದರೆ, ಅವರು ಇಂಗ್ಲೆಂಡ್ ಸರಣಿಯನ್ನು ಸಹ ತಪ್ಪಿಸಿಕೊಳ್ಳಬಹುದು. ಟಿ20 ವಿಶ್ವಕಪ್ ನಂತರ ವೈಯಕ್ತಿಕ ಕಾರಣಗಳಿಗಾಗಿ ಕ್ರಿಕೆಟ್​ನಿಂದ ದೂರ ಉಳಿದಿದ್ದ34 ವರ್ಷದ ಸ್ಯಾಂಟ್ನರ್ ಸಾಕಷ್ಟು ತಡವಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದರು. ಮುಂಬೈ ಪರ ನಾಲ್ಕು ಪಂದ್ಯಗಳನ್ನು ಆಡಿದ್ದ ಸ್ಯಾಂಟ್ನರ್ ಐದು ವಿಕೆಟ್‌ಗಳನ್ನು ಪಡೆದು 26 ರನ್‌ ಕೂಡ ಕಲೆಹಾಕಿದ್ದರು.

Leave a Reply

Your email address will not be published. Required fields are marked *

error: Content is protected !!