ಉದಯವಾಹಿನಿ, ಭಾರತೀಯ ಚಿತ್ರರಂಗದ ದಂತಕಥೆ, ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ಬರೋಬ್ಬರಿ 13 ವರ್ಷಗಳ ನಂತರ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಅವರ ನಿರ್ದೇಶನದ ಹೊಸ ಚಿತ್ರ ‘ಸಿಂಗ್ ಗೀತಂ’ ಟೀಸರ್ ಬಿಡುಗಡೆಯಾಗಿದ್ದು, 94ನೇ ವಯಸ್ಸಿನಲ್ಲೂ ಅವರ ಕ್ರಿಯಾಶೀಲತೆ ಕಂಡು ಎಲ್ಲರೂ ಅಚ್ಚರಿಕೊಂಡಿದ್ದಾರೆ.ಇವರು ಜೆನ್-ಜಿ ತಲೆಮಾರಿಗಿಂತಲೂ ಮಿಗಿಲು ಎಂದು ಗುಣಗಾನ ಮಾಡುತ್ತಿದ್ದಾರೆ.ಸಿಂಗೀತಂ ಅವರ ಹೆಸರಿನಲ್ಲೇ ಇರುವ ‘ಸಿಂಗ್ ಗೀತಂ’ ಎಂಬ ಶೀರ್ಷಿಕೆಯ ಈ ಚಿತ್ರದ 1 ನಿಮಿಷ 22 ಸೆಕೆಂಡುಗಳ ಟೀಸರ್ ಕುತೂಹಲ ಮೂಡಿಸುವಂತಿದೆ. ಗಣಿಗಾರಿಕೆ ನಡೆಯುವ ಪಟ್ಟಣದ ಹಿನ್ನೆಲೆಯನ್ನು ಹೊಂದಿದ್ದು, ಅಲ್ಲಿ ಜನರು ಚಿನ್ನದ ಹುಡುಕಾಟದಲ್ಲಿ ತೊಡಗುತ್ತಾರೆ. ಪ್ರತಾಪ್ ಎಂಬ ಯುವಕ ವಿಚಿತ್ರ ಜಗತ್ತೊಂದಕ್ಕೆ ಪ್ರವೇಶಿಸಿದಾಗ ಎದುರಿಸುವ ಸವಾಲುಗಳು ಹಾಗೂ ಪ್ರಗತಿ ಮತ್ತು ಸಂರಕ್ಷಣೆಯ ನಡುವಿನ ಸಂಘರ್ಷವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರವು ಒಂದು ‘ಮ್ಯೂಸಿಕಲ್ ಫ್ಯಾಂಟಸಿ’ ಕಥಾಹಂದರವನ್ನು ಹೊಂದಿದೆ. ಅಯಾನ್, ಅಹಲ್ಯಾ ಬಾಮ್ರೂ ಮತ್ತು ಶಾಲಿನಿ ಕೊಂಡೆಪುಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೆ, ತುಳಸಿ ಪಿಎ, ಬ್ಯಾನರ್ಜಿ ಮತ್ತು ಶಿವನಾರಾಯಣ ಅವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ, ‘ಕಲ್ಕಿ 2898 ಎಡಿ’ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಅವರು ವೈಜಯಂತಿ ಮೂವೀಸ್ ಮತ್ತು ಸ್ವಪ್ನ ಸಿನಿಮಾ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ (DSP) ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
