ಉದಯವಾಹಿನಿ, ಬೆಂಗಳೂರು: ಪತಿಯೊಂದಿಗಿನ ಗಲಾಟೆಯಿಂದ ಬೇಸತ್ತ ಪತ್ನಿಯೊಬ್ಬಳು ಪುಟ್ಟ ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯಶವಂತಪುರ ಠಾಣೆ ವ್ಯಾಪ್ತಿಯ ಮತ್ತಿಕೆರೆಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ತಾಯಿ ಪವಿತ್ರಾ ಅವರಿಂದ ವಿಷಪ್ರಾಶನಕ್ಕೊಳಗಾದ ಗಂಡು ಮಕ್ಕಳಾದ 4 ವರ್ಷದ ಹಾಗೂ ಎರಡು ವರ್ಷ ವಯಸ್ಸಿನ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಪವಿತ್ರಾ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಪಾವಗಡ ಮೂಲದ ಪ್ರಶಾಂತ್ ಹಾಗೂ ಪವಿತ್ರಾ ದಂಪತಿ ಆರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಪ್ರಶಾಂತ್ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ಪವಿತ್ರಾ ಗೃಹಿಣಿಯಾಗಿದ್ದಳು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಪತಿ – ಪತ್ನಿ ನಡುವೆ ಇತ್ತೀಚಿಗೆ ಸಣ್ಣಪುಟ್ಟ ಕಾರಣಕ್ಕೆ ಆಗಾಗ್ಗೆ ಗಲಾಟೆಯಾಗುತ್ತಿತ್ತು. ನಿನ್ನೆ ಸಹ ದಂಪತಿ ನಡುವೆ ಗಲಾಟೆಯಾಗಿದೆ. ಅದರಿಂದ ಬೇಸತ್ತ ಪವಿತ್ರಾ, ಮನೆಯಲ್ಲಿದ್ದ ಪಾಷಾಣವನ್ನು ಮಕ್ಕಳಿಬ್ಬರಿಗೆ ಕುಡಿಸಿದ್ದಾಳೆ. ಬಳಿಕ ತಾನೂ ಸಹ ಕುಡಿದಿದ್ದಾಳೆ.

ಬೆಳಗ್ಗೆ ಪತಿ ಎದ್ದಾಗ ಅಸ್ವಸ್ಥಳಾಗಿದ್ದ ಪತ್ನಿಯನ್ನು ವಿಚಾರಿಸಿದಾಗ ಕೃತ್ಯ ಬಯಲಾಗಿದೆ. ತಕ್ಷಣ ಮೂವರನ್ನೂ ಪ್ರಶಾಂತ್ ಯಶವಂತಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದುರದೃಷ್ಟವಶಾತ್ ಅಷ್ಟರಲ್ಲೇ ಮಕ್ಕಳಿಬ್ಬರೂ ಮೃತಪಟ್ಟಿದ್ದಾರೆ. ಪವಿತ್ರಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಕುರಿತು ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಯಶವಂತಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪತಿ ಪ್ರಶಾಂತ್ ಅವರಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಆತ್ಮಹತ್ಯೆ ಪರಿಹಾರವಲ್ಲ: ನಿಮಗೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದರೆ ಅಥವಾ ನೀವು ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದರೆ, ಇಲ್ಲವೇ ನಿಮಗೆ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ ಸಲಹೆ ನೀಡಲು ಯಾವಾಗಲೂ, ಯಾರಾದರೂ ಇದ್ದೇ ಇರುತ್ತಾರೆ. ಸ್ನೇಹ ಫೌಂಡೇಶನ್ – 04424640050 (24×7 ಲಭ್ಯವಿದೆ) ಅಥವಾ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸಹಾಯವಾಣಿ ಐಕಾಲ್ ನಂಬರ್​ 9152987821 (ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ಲಭ್ಯವಿದೆ) ಕರೆ ಮಾಡಬಹುದು.

Leave a Reply

Your email address will not be published. Required fields are marked *

error: Content is protected !!